ಟಿ20 ವಿಶ್ವಕಪ್‌ಗೆ ಮುನ್ನ ಕೊನೆಯ ಅಗ್ನಿಪರೀಕ್ಷೆ

ಇಂದು ಭಾರತ–ನ್ಯೂಜಿಲೆಂಡ್ ಮೊದಲ ಟಿ20 ಮುಖಾಮುಖಿ

ನಾಗ್ಪುರ, ಫೆ.7:
ಐಸಿಸಿ ಟಿ20 ವಿಶ್ವಕಪ್‌ಗೆ ಇನ್ನೇನು ದಿನಗಳು ಮಾತ್ರ ಬಾಕಿ ಇರುವ ಸಂದರ್ಭದಲ್ಲಿ, ಭಾರತ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಕೊನೆಯ ಸಿದ್ಧತಾ ವೇದಿಕೆಯಾಗಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ಬುಧವಾರದಿಂದ ಕಿವೀಸ್ ವಿರುದ್ಧ ಸೆಣಸಾಡಲಿದ್ದು, ಸರಣಿ ಗೆದ್ದು ವಿಶ್ವಕಪ್‌ಗೆ ಆತ್ಮವಿಶ್ವಾಸದೊಂದಿಗೆ ಕಾಲಿಡುವ ಗುರಿ ಹೊಂದಿದೆ.

ಬೂಮ್ರಾ–ಹಾರ್ದಿಕ್ ವಾಪಸಿ; ತಂಡಕ್ಕೆ ಹೊಸ ಬಲ

ಈ ಸರಣಿಗೆ ಜಸ್ಪ್ರೀತ್ ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಮರಳಿರುವುದು ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಜೊತೆಗೆ ವರುಣ್ ಚಕ್ರವರ್ತಿ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದು, ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ.

2024ರಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ತಂಡ 25 ಟಿ20 ಪಂದ್ಯಗಳಲ್ಲಿ 18ರಲ್ಲಿ ಜಯ ಸಾಧಿಸಿದೆ. ಒಟ್ಟಾರೆ ತಂಡದ ಪ್ರದರ್ಶನ ಉತ್ತಮವಾಗಿದ್ದರೂ, ನಾಯಕನ ಬ್ಯಾಟಿಂಗ್ ಫಾರ್ಮ್ ಮಾತ್ರ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಸೂರ್ಯ 21 ಪಂದ್ಯಗಳಲ್ಲಿ ಕೇವಲ 218 ರನ್ ಗಳಿಸಿದ್ದು, ಒಂದೇ ಒಂದು ಅರ್ಧಶತಕವೂ ದಾಖಲಿಸಿಲ್ಲ.

ಇಶಾನ್ ಕಿಶನ್‌ಗೆ ಅವಕಾಶ

ಗಾಯದ ಕಾರಣ ತಿಲಕ್ ವರ್ಮಾ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಇತ್ತು. ಆದರೆ ತಿಲಕ್ ಸ್ಥಾನದಲ್ಲಿ ಇಶಾನ್ ಕಿಶನ್ ಆಡಲಿದ್ದಾರೆ ಎಂದು ನಾಯಕ ಸೂರ್ಯಕುಮಾರ್ ಖಚಿತಪಡಿಸಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಅರ್ಶ್ದೀಪ್ ಸಿಂಗ್ ಹಾಗೂ ಕುಲ್ದೀಪ್ ಯಾದವ್ ನಡುವೆ ಪ್ಲೇಯಿಂಗ್ ಇಲೆವನ್‌ಗಾಗಿ ಪೈಪೋಟಿ ಮುಂದುವರಿದಿದೆ.

ಭಾರತದಲ್ಲಿ ಟಿ20 ಸರಣಿ ಗೆಲ್ಲಲು ಕಿವೀಸ್ ಪ್ರಯತ್ನ

ನ್ಯೂಜಿಲೆಂಡ್ ತಂಡ ಕಳೆದ ಒಂದು ವರ್ಷದೊಳಗೆ ಭಾರತ ನೆಲದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ಇದೀಗ ಟಿ20 ಸರಣಿಯತ್ತ ಕಣ್ಣಿಟ್ಟಿದೆ. 2012ರಲ್ಲಿ ನಡೆದ ಎರಡು ಪಂದ್ಯಗಳ ಟಿ20 ಸರಣಿಯನ್ನು 1-0 ಅಂತರದಲ್ಲಿ ಗೆದ್ದಿದ್ದೇ ಭಾರತದಲ್ಲಿ ಕಿವೀಸ್ ಗಳಿಸಿದ ಏಕೈಕ ಟಿ20 ಸರಣಿ ಜಯ. ಈ ಬಾರಿ ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ತಂಡ ಹೊಸ ಸಾಧನೆಗೆ ಹವಣಿಸಿದೆ.

ವಿಶ್ವಕಪ್ ಬಳಿಕ ಭಾರತದ ಪ್ರಭುತ್ವ

2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಭಾರತ ತಂಡ 36 ಟಿ20 ಪಂದ್ಯಗಳನ್ನು ಆಡಿದ್ದು, 29ರಲ್ಲಿ ಜಯ ಗಳಿಸಿದೆ. ಕೇವಲ 5 ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ. ವಿಶ್ವಕಪ್ ಬಳಿಕ ನಡೆದ ಎಲ್ಲಾ ಟಿ20 ಸರಣಿಗಳನ್ನೂ ಭಾರತ ತನ್ನದಾಗಿಸಿಕೊಂಡಿದೆ. 2026ರ ವಿಶ್ವಕಪ್‌ಗೆ ಮುನ್ನ ಈ ಅಜೇಯ ದಾಖಲೆ ಉಳಿಸಿಕೊಳ್ಳುವುದು ಟೀಂ ಇಂಡಿಯಾದ ಪ್ರಮುಖ ಗುರಿಯಾಗಿದೆ.

ಸಂಭಾವ್ಯ ತಂಡಗಳು

ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಿಂಕು ಸಿಂಗ್, ಹರ್ಷಿತ್/ದುಬೆ, ಅರ್ಶ್ದೀಪ್/ಕುಲ್ದೀಪ್, ಜಸ್ಪ್ರೀತ್ ಬೂಮ್ರಾ, ವರುಣ್ ಚಕ್ರವರ್ತಿ
ನ್ಯೂಜಿಲೆಂಡ್: ರಾಬಿನ್ಸನ್, ಕಾನ್ವೇ, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ನೀಶಮ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಇಶ್ ಸೋಧಿ, ಜೇಕಬ್ ಡಫಿ

ಪಂದ್ಯ ಮಾಹಿತಿ

  • ಪಂದ್ಯ ಆರಂಭ: ಸಂಜೆ 7 ಗಂಟೆ

  • ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್

  • ಪಿಚ್ ವರದಿ: ನಾಗ್ಪುರ ಪಿಚ್ ವೇಗ ಹಾಗೂ ಬೌನ್ಸ್‌ಗೆ ಪ್ರಸಿದ್ಧ. ವೇಗಿಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಇದೆ. ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 160–175ರ ನಡುವೆ.

ಅಂಕಿಅಂಶಗಳು

  • 8 ಟಿ20 ಸರಣಿ: ಭಾರತ 5, ನ್ಯೂಜಿಲೆಂಡ್ 3

  • 18 ಜಯ: ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ 25 ಟಿ20ಗಳಲ್ಲಿ 18ರಲ್ಲಿ ಗೆಲುವು


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-21 10:18:20
No Reviews