ಸೂಪರ್‌ಸ್ಟಾರ್ ರಜನಿಕಾಂತ್ ಕೇವಲ ಸಿನಿಮಾ ತಾರೆಯಲ್ಲ ಮಾನವೀಯ ಮೌಲ್ಯಗಳ ಜೀವಂತ ಉದಾಹರಣೆ!

ಸಮಾಜಕ್ಕೆ ಒಳಿತು ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ರಜನಿಕಾಂತ್ ಅವರಿಗೆ ಸಹಜವಾಗಿಯೇ ಇದೆ. ಇತ್ತೀಚೆಗೆ ಅವರು ರಸ್ತೆ ಬದಿ ಸಣ್ಣ ಹೋಟೆಲ್ ನಡೆಸುತ್ತಿರುವ ವ್ಯಕ್ತಿಯೊಬ್ಬರನ್ನು ಕುಟುಂಬ ಸಮೇತ ತಮ್ಮ ನಿವಾಸಕ್ಕೆ ಆಹ್ವಾನಿಸಿ ಸನ್ಮಾನಿಸಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

15 ವರ್ಷಗಳಿಂದ 5 ರೂಪಾಯಿಗೆ ಪರೋಟ

ಮಧುರೈನಲ್ಲಿ ರಸ್ತೆ ಬದಿ ಸಣ್ಣ ಹೋಟೆಲ್ ನಡೆಸುತ್ತಿರುವ ಶೇಖರ್ ಎಂಬವರು ಕಳೆದ 15 ವರ್ಷಗಳಿಂದ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಒಂದು ಪರೋಟದ ಬೆಲೆ 30ರಿಂದ 50 ರೂಪಾಯಿಯವರೆಗೆ ಇರುವ ನಡುವೆಯೂ, ಶೇಖರ್ ತಮ್ಮ ದರವನ್ನು ಏರಿಸಿಲ್ಲ. ಈ ಅಪರೂಪದ ಸೇವೆಯೇ ರಜನಿಕಾಂತ್ ಅವರ ಗಮನ ಸೆಳೆದಿದೆ. ವಿಶೇಷವೆಂದರೆ, ಶೇಖರ್ ಅವರು ಈ ಸೇವೆಯನ್ನು ಆರಂಭಿಸಿದ್ದು ಕೂಡ ರಜನಿಕಾಂತ್ ಅವರ ಜನ್ಮದಿನದಂದೇ.

ಮನೆಗೆ ಕರೆಸಿ ಭಾವುಕ ಸನ್ಮಾನ

ಇತ್ತೀಚೆಗೆ ರಜನಿಕಾಂತ್ ಅವರು ಶೇಖರ್ ಹಾಗೂ ಅವರ ಕುಟುಂಬದ ಸದಸ್ಯರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಆತಿಥ್ಯ ನೀಡಿ, ಶೇಖರ್ ಅವರ ಕೊರಳಿಗೆ ಚಿನ್ನದ ಸರ ಹಾಕಿ ಗೌರವಿಸಿದ್ದಾರೆ. ಜೊತೆಗೆ ತಮ್ಮ ಆದರ್ಶ ಗುರುವಿನ ಫೋಟೋವನ್ನು ಉಡುಗೊರೆಯಾಗಿ ನೀಡಿ ಭಾವುಕವಾಗಿ ಮಾತನಾಡಿದ್ದಾರೆ. ಶೇಖರ್ ಕುಟುಂಬಕ್ಕೆ ಆರ್ಥಿಕ ಸಹಾಯ ಕೂಡ ನೀಡಲಾಗಿದೆ ಎಂಬ ಮಾಹಿತಿ ಇದೆ.

ಅಪ್ಪಟ ರಜನಿಕಾಂತ್ ಅಭಿಮಾನಿ

ಶೇಖರ್ ಅವರು ರಜನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ತಮ್ಮ ಹೋಟೆಲಿನಲ್ಲಿ ರಜನಿಕಾಂತ್ ಅವರ ಫೋಟೋಗಳು ಮತ್ತು ಪೋಸ್ಟರ್‌ಗಳನ್ನು ಅಲಂಕರಿಸಿಕೊಂಡಿದ್ದಾರೆ. ಕೈ ಮೇಲೆ ರಜನಿಕಾಂತ್ ಅವರ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ ಎಂಬುದು ವಿಶೇಷ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ರಜನಿಕಾಂತ್ ಮತ್ತು ಶೇಖರ್ ಅವರ ಭೇಟಿಯ ಫೋಟೋಗಳು ಹಾಗೂ ಮಾನವೀಯ ಕ್ಷಣಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಸಮಾಜಸೇವೆಗೆ ಹೆಸರುವಾಸಿಯಾಗಿರುವ ರಜನಿಕಾಂತ್ ಅವರು ಈ ನಡೆ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-26 13:32:20
No Reviews