WPL 2026 ಲೆಕ್ಕಾಚಾರ,ನೇರ ಫೈನಲ್ ಟಿಕೆಟ್‌ಗೆ RCBಗೆ ಇನ್ನೆಷ್ಟು ಗೆಲುವು ಬೇಕು?

ಒಂದೇ ಒಂದು ಸೋಲು ಕಾಣದೆ ಆಡಿರುವ ಐದು ಪಂದ್ಯಗಳನ್ನೂ ಗೆದ್ದಿರುವ ಆರ್ಸಿಬಿ ತಂಡ ಈಗಾಗಲೇ 10 ಅಂಕಗಳನ್ನು ಗಳಿಸಿ ಪ್ಲೇಆಫ್‌ಗೆ ಅಧಿಕೃತವಾಗಿ ಪ್ರವೇಶಿಸಿದೆ.

ಕೇವಲ ಐದು ಪಂದ್ಯಗಳಲ್ಲೇ ಟಾಪ್-3 ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಆರ್ಸಿಬಿ, ಇದೀಗ ನೇರವಾಗಿ ಫೈನಲ್ ಪ್ರವೇಶಿಸುವ ಉತ್ತಮ ಅವಕಾಶವನ್ನು ಹೊಂದಿದೆ. WPL ಫಾರ್ಮ್ಯಾಟ್ ಪ್ರಕಾರ, ಲೀಗ್ ಹಂತದ ಅಂತ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಎರಡನೇ ಹಾಗೂ ಮೂರನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯವಾಡಿ, ಅದರ ವಿಜೇತ ತಂಡ ಫೈನಲ್‌ಗೆ ಪ್ರವೇಶಿಸುತ್ತದೆ.

ಪ್ರಸ್ತುತ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸ್ಥಾನದಲ್ಲಿದೆ. ತಂಡಕ್ಕೆ ಇನ್ನೂ ಮೂರು ಪಂದ್ಯಗಳು ಬಾಕಿಯಿದ್ದು, ಅವುಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದರೂ ಫೈನಲ್ ಟಿಕೆಟ್ ಖಚಿತವಾಗಲಿದೆ. ಕಾರಣ, ಆರ್ಸಿಬಿಯನ್ನು ಹೊರತುಪಡಿಸಿ ಉಳಿದ ಯಾವುದೇ ತಂಡಕ್ಕೂ 12 ಅಂಕಗಳನ್ನು ತಲುಪುವ ಅವಕಾಶವೇ ಇಲ್ಲ.

ಈಗಾಗಲೇ ಎಲ್ಲ ತಂಡಗಳು ತಲಾ ಐದು ಪಂದ್ಯಗಳನ್ನು ಆಡಿದ್ದು, ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ತಲಾ ಎರಡು ಗೆಲುವುಗಳೊಂದಿಗೆ 4 ಅಂಕಗಳನ್ನು ಮಾತ್ರ ಹೊಂದಿವೆ. ಇವುಗಳು ಉಳಿದ ಮೂರು ಪಂದ್ಯಗಳನ್ನೆಲ್ಲಾ ಗೆದ್ದರೂ ಗರಿಷ್ಠ 10 ಅಂಕಗಳವರೆಗೆ ಮಾತ್ರ ತಲುಪಬಹುದು.

ಇದರಿಂದಾಗಿ ಈಗಾಗಲೇ 10 ಅಂಕಗಳನ್ನು ಹೊಂದಿರುವ RCB, ಮುಂದಿನ ಮೂರು ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ದಾಖಲಿಸಿದರೂ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಈ ಮೂಲಕ ನೇರವಾಗಿ ಫೈನಲ್ ಪ್ರವೇಶಿಸುವ ಸಾಧ್ಯತೆ ಬಹುತೇಕ ಖಚಿತವಾಗಿದ್ದು, ಈ ಬಾರಿ ಆರ್ಸಿಬಿ ಫೈನಲ್ ಆಡುವ ನಿರೀಕ್ಷೆ ಮತ್ತಷ್ಟು ಬಲಗೊಂಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-20 10:43:18
No Reviews