ಮನೆಯವರಿಗೆ ತಿಳಿಸದೆ ಹೊಲದಲ್ಲಿ ₹5 ಲಕ್ಷ ಬಚ್ಚಿಟ್ಟ ರೈತ; ಗೆದ್ದಲು ತಿಂದ ಹಣ ಕಂಡು ಕಣ್ಣೀರಿಟ್ಟ!

ಗೆದ್ದಲು ಪಾಲಾದ ರೈತನ ₹5 ಲಕ್ಷ; ಹೊಲದಲ್ಲಿ ಹೂತಿಟ್ಟ ಹಣಕ್ಕೆ ಕನ್ನ!

ಜೈಪುರ, ಆ. 10: ಮನೆಯವರಿಗೆ ತಿಳಿಯದಂತೆ ಹೊಲದಲ್ಲಿ ರಹಸ್ಯವಾಗಿ ಹೂತಿಟ್ಟಿದ್ದ ರೈತನ ₹5 ಲಕ್ಷ ಹಣ ಗೆದ್ದಲು ಪಾಲಾದ ಘಟನೆ ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ನಡೆದಿದೆ. ಸುಮಾರು ಒಂದು ವರ್ಷದ ಹಿಂದೆ ಜಮೀನು ಮಾರಾಟ ಮಾಡಿ ಬಂದಿದ್ದ ಹಣವನ್ನು ಕೃಷಿ ಜಮೀನಿನಲ್ಲಿ ಹೂತಿಟ್ಟಿದ್ದ ರೈತನಿಗೆ ಇದೀಗ ದೊಡ್ಡ ಆಘಾತ ಎದುರಾಗಿದೆ.

ಪಚ್ಪದ್ರಾ ನಿವಾಸಿ ಮಂಗಿಲಾಲ್ ಮೇಘವಾಲ್ ಅವರು ಜಮೀನು ಮಾರಾಟದಿಂದ ಬಂದಿದ್ದ ಸುಮಾರು ₹5 ಲಕ್ಷವನ್ನು ಮನೆಯ ಖರ್ಚಿಗೆ ಬಳಕೆಯಾಗದಂತೆ ಉಳಿಸಿಕೊಳ್ಳಲು ನಿರ್ಧರಿಸಿದ್ದರು. ಕೃಷಿ ಜಮೀನಿನಲ್ಲಿ ಸಣ್ಣ ಮನೆ ನಿರ್ಮಿಸುವ ಉದ್ದೇಶದಿಂದ ಹಣವನ್ನು ಉಳಿಸಿಕೊಂಡಿದ್ದ ಅವರು, ಕುಟುಂಬದವರಿಗೆ ತಿಳಿಯದಂತೆ ₹500 ಮುಖಬೆಲೆಯ ನೋಟುಗಳನ್ನು ಪಾಲಿಥಿನ್ ಚೀಲದಲ್ಲಿ ಸುತ್ತಿ ಹೊಲದಲ್ಲಿ ಹೂತಿಟ್ಟಿದ್ದರು.

ಆದರೆ ಕಾಲ ಕಳೆದಂತೆ ಹಣ ಹೂತಿಟ್ಟಿದ್ದ ಸ್ಥಳವೇ ಅವರಿಗೆ ನೆನಪಾಗಲಿಲ್ಲ. ಹಲವು ದಿನಗಳ ಕಾಲ ಹುಡುಕಿದರೂ ಹಣ ಪತ್ತೆಯಾಗಿರಲಿಲ್ಲ. ಕೊನೆಗೆ ಕುಟುಂಬದವರಿಗೂ ವಿಷಯ ತಿಳಿಸಿದ್ದರು.

ಇತ್ತೀಚೆಗೆ ಮಳೆ ಬಳಿಕ ಜಮೀನಿನಲ್ಲಿ ಬಿತ್ತನೆಗಾಗಿ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡುತ್ತಿದ್ದಾಗ ಮಣ್ಣಿನ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಚೀಲವೊಂದು ಕಾಣಿಸಿಕೊಂಡಿದೆ. ಮಂಗಿಲಾಲ್ ಅವರ ಪತ್ನಿ ಹಾಗೂ ಮಗ ಚೀಲವನ್ನು ತೆರೆದಾಗ ಕಾಣಿಸಿಕೊಂಡಿದ್ದು ಹಣವಲ್ಲ, ಗೆದ್ದಲು ತಿಂದು ಹಾಳು ಮಾಡಿದ್ದ ₹500ರ ನೋಟುಗಳ ರಾಶಿ!

ಗೆದ್ದಲುಗಳಿಂದ ನೋಟುಗಳು ಬಹುತೇಕ ಸಂಪೂರ್ಣ ಹಾಳಾಗಿದ್ದು, ಕಷ್ಟಪಟ್ಟು ಕೂಡಿಟ್ಟಿದ್ದ ಹಣ ಕಣ್ಣೆದುರೇ ನಾಶವಾಗಿರುವುದನ್ನು ಕಂಡು ರೈತ ಕುಟುಂಬ ಕಂಗಾಲಾಗಿದೆ.

ಹಾನಿಗೊಳಗಾದ ನೋಟುಗಳನ್ನು ತೆಗೆದುಕೊಂಡು ಕುಟುಂಬವು ಪಚ್ಪದ್ರಾ ಹಾಗೂ ಬಲೋತ್ರಾದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿದೆ. ಆದರೆ ಹೆಚ್ಚಿನ ಪ್ರಕ್ರಿಯೆಗಾಗಿ ಜೈಪುರದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಆರ್ಥಿಕ ಸಂಕಷ್ಟ ಹಾಗೂ ಸೂಕ್ತ ಮಾಹಿತಿಯ ಕೊರತೆಯಿಂದ ಜೈಪುರಕ್ಕೆ ತೆರಳಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ.

ಕಷ್ಟಪಟ್ಟು ಕೂಡಿಟ್ಟ ಹಣವನ್ನು ರಹಸ್ಯವಾಗಿ ಉಳಿಸಿಕೊಳ್ಳಲು ಹೋಗಿ ಗೆದ್ದಲು ಪಾಲು ಮಾಡಿಕೊಂಡ ರೈತನ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಗೆದ್ದಲು ಹಿಡಿದ ನೋಟುಗಳ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿದ್ದು, ಘಟನೆಯ ಕುರಿತು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-08-10 14:59:05
No Reviews