ತಮಿಳುನಾಡಿನಲ್ಲಿ ಹೊಸ ಸಂಪುಟ: ವಿಜಯ್ ಸರ್ಕಾರದಿಂದ 23 ಸಚಿವರು ಪ್ರಮಾಣವಚನ!

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (TVK Vijay) ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿ ಒಟ್ಟು 23 ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಇದರಲ್ಲಿ TVK ಪಕ್ಷದ 21 ಶಾಸಕರು ಹಾಗೂ ಮಿತ್ರಪಕ್ಷ ಕಾಂಗ್ರೆಸ್‌ನ 2 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಐಯುಎಂಎಲ್ ಮತ್ತು ವಿಸಿಕೆ ಪಕ್ಷಗಳು ಈ ಸಂಪುಟ ವಿಸ್ತರಣೆಯಲ್ಲಿ ಭಾಗವಹಿಸಿಲ್ಲ. ಪ್ರತಿ ಎರಡು ಶಾಸಕರನ್ನು ಹೊಂದಿರುವ ಈ ಎರಡೂ ಪಕ್ಷಗಳು ಟಿವಿಕೆ ಸರ್ಕಾರದ ಸಂಖ್ಯಾಬಲಕ್ಕೆ ನಿರ್ಣಾಯಕವಾಗಿವೆ ಎಂಬುದು ರಾಜಕೀಯ ವಲಯದ ಗಮನಸೆಳೆಯುವ ವಿಚಾರವಾಗಿದೆ.

ಇಂದು ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಶ್ರೀನಾಥ್, ಕಮಲಿ ಎಸ್, ಸಿ ವಿಜಯಲಕ್ಷ್ಮಿ, ಆರ್ ವಿ ರಂಜಿತ್ಕುಮಾರ್, ವಿನೋತ್, ರಾಜೀವ್, ಬಿ ರಾಜಕುಮಾರ್, ವಿ ಗಾಂಧಿರಾಜ್, ಮಥನ್ ರಾಜಾ ಪಿ, ಜೆಗದೇಶ್ವರಿ ಕೆ, ರಾಜೇಶ್ ಕುಮಾರ್ ಎಸ್, ಎಂ ವಿಜಯ್ ಬಾಲಾಜಿ, ಲೋಗೇಶ್ ತಮಿಳ್ಸೆಲ್ವನ್ ಡಿ, ವಿಜಯ್ ತಮಿಳನ್ ಪಾರ್ತಿಬನ್ ಎ, ರಮೇಶ್ ಕುಮಾರ್, ಪಿ ವಿಶ್ವನಾಥಂ, ಪಿ ವಿಶ್ವನಾಥನ್, ಆರ್.ವಿ. ಫರ್ವಾಸ್ ಜೆ, ಡಿ ಶರತ್‌ಕುಮಾರ್, ಎನ್ ಮೇರಿ ವಿಲ್ಸನ್, ವಿಘ್ನೇಶ್ ಕೆ ಹಾಗೂ ಕಾಂಗ್ರೆಸ್‌ನ ರಾಜೇಶ್ ಕುಮಾರ್ ಮತ್ತು ತಿರು ಪಿ. ವಿಶ್ವನಾಥನ್ ಸೇರಿದ್ದಾರೆ.

ಇದೇ ವೇಳೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಡಿಎಂಕೆ ನಾಯಕ ಅನಿತಾ ರಾಧಾಕೃಷ್ಣನ್ ಟಿವಿಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರ ಪ್ರಕಾರ ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿದ್ದು, ಕೆಲವೇ ತಿಂಗಳಲ್ಲಿ ಸರ್ಕಾರ ಪತನವಾಗಲಿದೆ ಎಂಬ ಭವಿಷ್ಯವನ್ನೂ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ನಾಲ್ಕು ತಿಂಗಳಷ್ಟೇ ಆಯುಷ್ಯವಿದೆ ಎಂದು ಹೇಳಿದ್ದು, ವಿಲ್ಲಿವಕ್ಕಂ ಕ್ಷೇತ್ರದ ವಿಷಯಕ್ಕೂ ಸವಾಲು ಹಾಕಿದ್ದಾರೆ. “ಧೈರ್ಯವಿದ್ದರೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಬನ್ನಿ” ಎಂದು ನೇರ ಸವಾಲು ಎಸೆದಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-21 11:34:56
No Reviews