ಮಧ್ಯರಾತ್ರಿಯಲ್ಲಿ ಭಯಾನಕ ದುರಂತ: ಸ್ಲೀಪರ್ ಬಸ್‌ಗೆ ಬೆಂಕಿ, 5 ಮಂದಿಗೆ ಗಾಯ

ನಿಟ್ಟೂರಿನಿಂದ ಬೆಂಗಳೂರಿಗೆ ಹೊರಟಿದ್ದ ಅನ್ನಪೂರ್ಣೇಶ್ವೇರಿ ಟ್ರಾವಲ್ಸ್‌ಗೆ ಸೇರಿದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಬಸ್ ನಿಲ್ಲಿಸಲು ಚಾಲಕ ಮುಂದಾದಾಗ ಮರಕ್ಕೆ ಡಿಕ್ಕಿಯಾಯಿತು. ಆದರೆ ಬಸ್‌ನಲ್ಲಿದ್ದ 36 ಪ್ರಯಾಣಿಕರು ತಕ್ಷಣ ಕೆಳಗಿಳಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿತ್ರದುರ್ಗದ ಖಾಸಗಿ ಬಸ್ ಅಗ್ನಿದುರಂತದ ಬಳಿಕ ಎಚ್ಚೆತ್ತಿರುವ ರಾಜ್ಯ ಸರ್ಕಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆಯಂತೆ ಸ್ಲೀಪರ್ ಬಸ್‌ಗಳಲ್ಲಿ ಸುರಕ್ಷತಾ ಕ್ರಮಗಳ ಕಡ್ಡಾಯ ಪಾಲನೆಗೆ ಖಡಕ್ ಸೂಚನೆ ನೀಡಿದೆ. ಸುರಕ್ಷತೆ ಲೋಪ, ಪ್ರಯಾಣಿಕರ ಜೊತೆಗೆ ಲಗೇಜ್ ಹೇರಿಕೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆ, ಬಸ್ ಮಾಲಿಕರು ಹಾಗೂ ಬಾಡಿ ಬಿಲ್ಡರ್‌ಗಳಿಗೆ ಎಂಟು ಕಡ್ಡಾಯ ನಿಯಮಗಳನ್ನು ಜಾರಿಗೆ ತರಲಾಗಿದೆ.

ಈ ನಿಯಮಗಳಂತೆ ಚಾಲಕರ ಹಿಂಬದಿ ಎಮರ್ಜೆನ್ಸಿ ಡೋರ್ ಹಾಗೂ ಬರ್ತ್‌ಗಳ ಸ್ಲೈಡರ್ ತೆರೆಯುವ ವ್ಯವಸ್ಥೆ, ತಿಂಗಳೊಳಗೆ ಫೈರ್ ಡಿಟೆಕ್ಷನ್ ಅಳವಡಿಕೆ, 10 ಕೆಜಿ ತೂಕದ ಅಗ್ನಿಶಾಮಕ ಸಾಧನ, ಅನಧಿಕೃತ ಚಾಸಿಸ್ ವಿಸ್ತರಣೆಗೆ ತಡೆ, ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣಪತ್ರ, ಪ್ರಯಾಣಿಕರ ಸುರಕ್ಷತಾ ಮಾನದಂಡ ಪೂರೈಸಿದರೆ ಮಾತ್ರ ಎಫ್‌ಸಿ, ಹಾಗೂ ಬಸ್ ಕವಚ ನಿರ್ಮಾಣ ಸಂಸ್ಥೆಯ ಸಿಂಧುತ್ವ ಪರಿಶೀಲನೆಯ ನಂತರವೇ ನೋಂದಣಿ ಕಡ್ಡಾಯವಾಗಿದೆ.

ಇದಲ್ಲದೆ, ಪ್ರಯಾಣಿಕರಿಗೆ ಅಗ್ನಿ ಅಪಾಯದ ಸಂದರ್ಭದಲ್ಲಿ ನೀಡಬೇಕಾದ ಮಾಹಿತಿ, ಫೈರ್ ಎಕ್ಸ್ಟಿಂಗ್‌ವಿಷರ್ ಬಳಕೆ, ಎಮರ್ಜೆನ್ಸಿ ಎಕ್ಸಿಟ್ ಡೋರ್‌ಗಳ ಬಳಿ ಯುವಕರು ಮತ್ತು ಮಧ್ಯವಯಸ್ಕರಿಗೆ ಆಸನ ವ್ಯವಸ್ಥೆ, ಎಸಿ ಬಸ್‌ಗಳಲ್ಲಿ ಬೆಂಕಿ ನಂದಿಸುವ ವಿಧಾನ, ಗ್ಲಾಸ್ ಒಡೆಯಲು ಹ್ಯಾಮರ್‌ಗಳು, ಡೋರ್ ಜಂಪ್ ಮಾಡಲು ಮೆಟ್ಟಿಲುಗಳು ಹಾಗೂ ಅಪಾಯದ ವೇಳೆ ಚಾಲಕ ಅಲರಾಂ ನೀಡುವ ವ್ಯವಸ್ಥೆಗಳನ್ನು ಕಡ್ಡಾಯಗೊಳಿಸಲು ಸಾರಿಗೆ ಸಚಿವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-28 13:58:09
No Reviews