ಸೈಮಾ 2026ಕ್ಕೆ ಶ್ರೀಮುರುಳಿ ಎಂಟ್ರಿ; ಕನ್ನಡವನ್ನು ಪ್ರತಿನಿಧಿಸಲಿರುವ ರೋರಿಂಗ್ ಸ್ಟಾರ್!

ಸೈಮಾ 2026ಕ್ಕೆ ಕ್ಷಣಗಣನೆ; ಕನ್ನಡದ ಪರ ಶ್ರೀಮುರುಳಿ, ಸೆಪ್ಟೆಂಬರ್ 11-12ರಂದು ಅದ್ಧೂರಿ ಸಂಭ್ರಮ

ಬೆಂಗಳೂರು: ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಒಂದಾದ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ (ಸೈಮಾ) ತನ್ನ 14ನೇ ಆವೃತ್ತಿಯೊಂದಿಗೆ ಮತ್ತೊಮ್ಮೆ ಸಿನಿಪ್ರಿಯರ ಮನಗೆಲ್ಲಲು ಸಜ್ಜಾಗಿದೆ. ಸೆಪ್ಟೆಂಬರ್ 11 ಮತ್ತು 12ರಂದು ನಡೆಯಲಿರುವ ಈ ಬಾರಿಯ ಸೈಮಾ ಸಮಾರಂಭ ಮತ್ತಷ್ಟು ಭವ್ಯವಾಗಿ ಆಯೋಜಿಸಲಾಗುತ್ತಿದೆ.

ಈ ಕುರಿತು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ನಟ ಶ್ರೀಮುರುಳಿ, ನಟಿಯರಾದ ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ ಹಾಗೂ ಫಾರಿಯಾ ಅಬ್ದುಲ್ಲಾ ಕಾರ್ಯಕ್ರಮದ ವಿಶೇಷತೆಗಳನ್ನು ಹಂಚಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋರಿಂಗ್ ಸ್ಟಾರ್ ಶ್ರೀಮುರುಳಿ, ಈ ಬಾರಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಜವಾಬ್ದಾರಿ ಸಿಕ್ಕಿರುವುದು ತಮ್ಮ ಪಾಲಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

"ಸೈಮಾ ವೇದಿಕೆಯಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನನಗೆ ತುಂಬಾ ಸಂತೋಷ. ಈ ಬಾರಿಯ ಸಮಾರಂಭ ಮತ್ತಷ್ಟು ಅದ್ಧೂರಿಯಾಗಿ ನಡೆಯಲಿದ್ದು, ಎಲ್ಲರಿಗೂ ಮರೆಯಲಾಗದ ಅನುಭವವಾಗಲಿದೆ ಎಂಬ ವಿಶ್ವಾಸವಿದೆ" ಎಂದು ಅವರು ಹೇಳಿದರು.

ತಮ್ಮ ಕುಟುಂಬ ಮತ್ತು ಸೈಮಾ ನಡುವಿನ ವಿಶೇಷ ಬಾಂಧವ್ಯವನ್ನು ಸ್ಮರಿಸಿದ ಶ್ರೀಮುರುಳಿ, "ಕಳೆದ 14 ವರ್ಷಗಳಿಂದ ನಮ್ಮ ಕುಟುಂಬಕ್ಕೆ ಸೈಮಾ ಜೊತೆ ಆತ್ಮೀಯ ನಂಟಿದೆ. ಅಪ್ಪು ಮಾಮ ನಾಲ್ಕು ಬಾರಿ, ಶಿವಣ್ಣ ಮಾಮ ಮೂರು ಬಾರಿ ಸೈಮಾ ಪ್ರಶಸ್ತಿ ಪಡೆದಿದ್ದಾರೆ. ನನ್ನ ಅಣ್ಣ ವಿಜಯ್ ರಾಘವೇಂದ್ರ ಎರಡು ಬಾರಿ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ನನಗೂ 'ಮಫ್ತಿ' ಚಿತ್ರದ ಅಭಿನಯಕ್ಕಾಗಿ ಬೆಸ್ಟ್ ಲೀಡ್ (ಕ್ರಿಟಿಕ್ಸ್) ಪ್ರಶಸ್ತಿ ದೊರೆತಿದ್ದು, ಅದು ನನ್ನ ಸಿನಿ ಬದುಕಿನ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ" ಎಂದು ಹೇಳಿದರು.

"ಸೈಮಾ ಎಲ್ಲಾ ಭಾಷೆಗಳ ಕಲಾವಿದರನ್ನು ಒಂದೇ ವೇದಿಕೆಗೆ ತರುವ ಅಪರೂಪದ ವೇದಿಕೆ. ಒಬ್ಬ ಕಲಾವಿದನ ಶ್ರಮವನ್ನು ಗುರುತಿಸಿ ಗೌರವಿಸುವ ಅತ್ಯುತ್ತಮ ಪ್ರಶಸ್ತಿ ಸಮಾರಂಭಗಳಲ್ಲಿ ಇದು ಪ್ರಮುಖವಾಗಿದೆ. ಈ ಬಾರಿಯ ಕಾರ್ಯಕ್ರಮವೂ ಹಿಂದಿನ ಎಲ್ಲ ಆವೃತ್ತಿಗಳಿಗಿಂತ ಹೆಚ್ಚು ಅದ್ಧೂರಿಯಾಗಿ ಮೂಡಿಬರಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಮಾತನಾಡಿ, "ನಂಬಿಕೆ, ಬದ್ಧತೆ ಮತ್ತು ನಿರಂತರತೆಯೇ ಸೈಮಾದ ಯಶಸ್ಸಿನ ಮೂಲಾಧಾರ. ಇಂದು ಸೈಮಾ ಕೇವಲ ದಕ್ಷಿಣ ಭಾರತದ ಪ್ರಶಸ್ತಿ ಸಮಾರಂಭವಲ್ಲ, ದೇಶದ ಅತ್ಯಂತ ಗೌರವಾನ್ವಿತ ಸಿನಿಮಾ ಪ್ರಶಸ್ತಿ ವೇದಿಕೆಗಳಲ್ಲಿ ಒಂದಾಗಿ ಬೆಳೆದಿದೆ" ಎಂದು ಹೇಳಿದರು.

"ನಮ್ಮ ಈ ಪಯಣದಲ್ಲಿ ಜೊತೆಗಿದ್ದ ಚಿತ್ರರಂಗದ ಗಣ್ಯರು, ಪಾಲುದಾರರು, ಮಾಧ್ಯಮ ಮಿತ್ರರು ಮತ್ತು ಅಭಿಮಾನಿಗಳ ಬೆಂಬಲವೇ ನಮ್ಮ ದೊಡ್ಡ ಶಕ್ತಿ. ಅವರ ಸಹಕಾರದಿಂದಲೇ ಪ್ರತಿವರ್ಷ ಇನ್ನಷ್ಟು ಭವ್ಯವಾಗಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗುತ್ತಿದೆ. ಈ ವರ್ಷವೂ ಮಾರುತಿ ಸುಜುಕಿ ನೆಕ್ಸಾ ಜೊತೆ ನಾಲ್ಕನೇ ವರ್ಷವೂ ಸಹಭಾಗಿತ್ವ ಮುಂದುವರಿದಿದ್ದು, ಎಲ್ಲರಿಗೂ ನಾವು ಕೃತಜ್ಞರಾಗಿದ್ದೇವೆ" ಎಂದು ತಿಳಿಸಿದರು.

ಈ ಬಾರಿಯ ಸೈಮಾ ಸಮಾರಂಭವು ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳ ಅತ್ಯುತ್ತಮ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಗೌರವಿಸುವುದರ ಜೊತೆಗೆ, ಜಾಗತಿಕ ಮಟ್ಟದಲ್ಲಿ ದಕ್ಷಿಣ ಭಾರತೀಯ ಸಿನಿರಂಗದ ವೈಭವವನ್ನು ಮತ್ತೊಮ್ಮೆ ಅನಾವರಣಗೊಳಿಸಲು ಸಜ್ಜಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-08-03 11:22:55
No Reviews