ಪ್ರಿಯಾಂಕ್ ಖರ್ಗೆಯಿಂದ ಕೇಂದ್ರದ ವಿರುದ್ಧ ವಾಗ್ದಾಳಿ!

ಜಿ–ರಾಮ್–ಜಿ ಕಾಯ್ದೆ ವಿರೋಧಿಸಿ ರಾಜ್ಯ ಸರ್ಕಾರದ ನಿರ್ಣಯಕ್ಕೆ ವಿಧಾನಸಭೆ ಒಪ್ಪಿಗೆ

ಮನ್ರೇಗಾ ಯೋಜನೆಯ ಹೆಸರನ್ನು ಬದಲಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ–ರಾಮ್–ಜಿ (G-RAM-G) ಕಾಯ್ದೆ ವಿರುದ್ಧ ರಾಜ್ಯ ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಖಂಡನಾ ನಿರ್ಣಯವನ್ನು ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.


ಧ್ವನಿ ಮತದ ಮೂಲಕ ನಿರ್ಣಯ ಅಂಗೀಕಾರ

ನಿನ್ನೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಮನ್ರೇಗಾ ಪರವಾಗಿ ಹಾಗೂ ಜಿ–ರಾಮ್–ಜಿ ಕಾಯ್ದೆ ವಿರುದ್ಧ ನಿರ್ಣಯ ಮಂಡಿಸಿದ್ದರು. ಇಂದು ಸ್ಪೀಕರ್ ಯು.ಟಿ. ಖಾದರ್ ನಿರ್ಣಯವನ್ನು ಮತಕ್ಕೆ ಹಾಕಿದ್ದು, ಧ್ವನಿ ಮತದ ಮೂಲಕ ಅಂಗೀಕಾರವಾಗಿದೆ ಎಂದು ಘೋಷಿಸಿದರು. ನಿರ್ಣಯ ಅಂಗೀಕಾರವಾದ ನಂತರ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.


ಪ್ರಿಯಾಂಕ್ ಖರ್ಗೆಯಿಂದ ಕೇಂದ್ರದ ವಿರುದ್ಧ ವಾಗ್ದಾಳಿ

ವಿಧಾನಸಭೆಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ,

“ನರೇಗಾ ಯೋಜನೆಯನ್ನು ಎಲ್.ಕೆ. ಅಡ್ವಾಣಿ ಕೂಡ ಹೊಗಳಿದ್ದರು. ಆದರೆ ಈಗ ಅದೇ ಯೋಜನೆಯನ್ನು ಬದಲಾಯಿಸಿ ಜಿ–ರಾಮ್–ಜಿ ಕಾಯ್ದೆ ತಂದಿದ್ದಾರೆ”

ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸದಸ್ಯ ವರುಣ್ ಗಾಂಧಿ ಕೂಡ ಕಾರ್ಮಿಕರ ಬದುಕಿನ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದರು.


“ನಿರ್ಣಯ ಅಕ್ರಮ” – ಆರ್. ಅಶೋಕ್ ಆಕ್ರೋಶ

ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

“ವಿಧಾನಸಭೆಯಲ್ಲಿ ದೌರ್ಜನ್ಯ ಮಾಡಿ ನಿರ್ಣಯ ತಂದಿದ್ದಾರೆ. ಇದು ಸಂಪೂರ್ಣ ಅಕ್ರಮ. ಏಳು ದಿನಗಳ ಮುಂಚಿತ ನೋಟಿಸ್ ನೀಡಿಲ್ಲ. ಸ್ಪೀಕರ್ ನಡೆ ಸರಿಯಲ್ಲ”

ಎಂದು ಕಿಡಿಕಾರಿದರು.


ಜಿ–ರಾಮ್–ಜಿ ಯೋಜನೆ ಪಾರದರ್ಶಕ – ಬಿಜೆಪಿ ವಾದ

ಜಿ–ರಾಮ್–ಜಿ ಯೋಜನೆ ಪಾರದರ್ಶಕವಾಗಿದ್ದು, ಅದರಲ್ಲಿ ಕಮಿಷನ್‌ಗೆ ಅವಕಾಶ ಇಲ್ಲ ಎಂದು ಅಶೋಕ್ ಹೇಳಿದರು.
ಕೇಂದ್ರ ಸರ್ಕಾರದ ನಿಗಾ ಇರುವುದರಿಂದ ಲೂಟಿಗೆ ಅವಕಾಶವಿಲ್ಲ ಎಂದು ಅವರು ವಾದಿಸಿದರು.
ಅಲ್ಲದೆ, ಅಬಕಾರಿ ಇಲಾಖೆ ಹಗರಣ, 40–50 ಸಾವಿರ ಕೋಟಿ ರೂ ಲೂಟಿ ಆರೋಪಗಳನ್ನೂ ಸರ್ಕಾರದ ವಿರುದ್ಧ ಮುಂದಿಟ್ಟರು.


ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ

“ನಮ್ಮ ಧರಣಿ ನಿಲ್ಲಲ್ಲ. ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ”

ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದರು.


ಅರವಿಂದ ಬೆಲ್ಲದ್ ಟೀಕೆ

ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಮಾತನಾಡಿ,
ಕಾಂಗ್ರೆಸ್ ಕೇಂದ್ರದಿಂದ ಹಣ ಕೊಡುತ್ತಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ ಎಂದರು.
ವಾಜಪೇಯಿ ಕಾಲದಲ್ಲಿ ಸರ್ವಶಿಕ್ಷಾ ಅಭಿಯಾನ ಆರಂಭವಾಗಿದ್ದು, ಯುಪಿಎ ಸರ್ಕಾರವೂ ಕೇಂದ್ರದ ಪಾಲನ್ನು ಕಡಿಮೆ ಮಾಡಿಕೊಂಡಿತ್ತು ಎಂದು ಹೇಳಿದರು.
ಮನ್ರೇಗಾದಲ್ಲಿ ಲೂಟಿ ನಡೆದಿದೆ ಎಂಬ ಆರೋಪವನ್ನು ಗ್ರಾಮೀಣ ಜನರು ಮಾಡುತ್ತಿದ್ದಾರೆ ಎಂದೂ ಅವರು ಹೇಳಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-05 09:38:17
No Reviews