ಸಿನಿಮಾ ಯಾರಿಂದ ಬೇಕಾದರೂ ಕಲಿಯಬಹುದು, ಮನುಷ್ಯತ್ವ ರಾಜ್ ಸರ್‌ನಿಂದ

ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಾಯಕನಾಗಿ ಮಿಂಚಿದ್ದರೆ, ವಿಲನ್ ಪಾತ್ರದಲ್ಲಿ ಅನಿರುದ್ಧ್ ಭಟ್ ಅಬ್ಬರಿಸಿ ಎಲ್ಲರಿಂದ ಪ್ರಶಂಸೆ ಗಳಿಸಿದ್ದಾರೆ. ವಿಶೇಷವಾಗಿ ಅನಿರುದ್ಧ್ ಅವರ ನಟನೆಗೆ ಪ್ರೇಕ್ಷಕರು ಮತ್ತು ಚಿತ್ರರಂಗದಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಯಶಸ್ಸಿನ ನಡುವೆಯೇ ನಟ ಅನಿರುದ್ಧ್ ಭಟ್ ಅವರು ರಾಜ್ ಬಿ ಶೆಟ್ಟಿ ಅವರಿಗೆ ಮನಮುಟ್ಟುವ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಅಭಿನಯಕ್ಕೆ ಸಿಕ್ಕಿರುವ ಮೆಚ್ಚುಗೆಯ ಹಿಂದೆ ರಾಜ್ ಬಿ ಶೆಟ್ಟಿ ಅವರ ದೊಡ್ಡ ಪಾತ್ರವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪತ್ರದಲ್ಲಿ ಅನಿರುದ್ಧ್ ಅವರು “ಪ್ರೀತಿಯ ರಾಜ್ ಸರ್” ಎಂದು ಆರಂಭಿಸಿ ಕಳೆದ ಒಂದೂವರೆ-ಎರಡು ವರ್ಷಗಳಲ್ಲಿ ಅವರ ಜೊತೆ ಕಳೆದ ಕ್ಷಣಗಳನ್ನು ನೆನೆದು ಭಾವುಕರಾಗಿದ್ದಾರೆ. “ಈ ಪಾತ್ರ ಮಾಡೋದಕ್ಕೆ ನಾನು ಮೊದಲಿಗೆ ಹೆದರಿದ್ದೆ. ‘ನೀನ್ ಮಾಡ್ತಿಯಾ ಮಗ, ಮಾಡು’ ಅಂತ ನೀವು ಹೇಳಿದ್ಮೇಲೆ ನನಗೆ ನನ್ನ ಮೇಲೆ ನಂಬಿಕೆ ಬಂತು” ಎಂದು ಅವರು ತಿಳಿಸಿದ್ದಾರೆ.

ಶೂಟಿಂಗ್ ಸಮಯದಲ್ಲಿ ಹೊಸಬನಾದ ತಮ್ಮನ್ನು ರಾಜ್ ಬಿ ಶೆಟ್ಟಿ ತಾಳ್ಮೆಯಿಂದ ಮಾರ್ಗದರ್ಶನ ಮಾಡಿದ ಬಗ್ಗೆ ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಜೊತೆಯಲ್ಲಿ ಊಟ ಮಾಡಿಸುವುದು, ತಪ್ಪುಗಳನ್ನೂ ಪ್ರೀತಿಯಿಂದ ತಿದ್ದುವುದು, ಕ್ಲೈಮ್ಯಾಕ್ಸ್ ಶೂಟಿಂಗ್ ನಂತರ ಮನಸ್ಸು ಕುಗ್ಗಿದಾಗ ಅಣ್ಣನಂತೆ ಸಮಾಧಾನಪಡಿಸುವುದು – ಇಂತಹ ಅನೇಕ ಘಟನೆಗಳನ್ನು ಅವರು ಹಂಚಿಕೊಂಡಿದ್ದಾರೆ.

“ನನ್ನ ಖುಷಿಯನ್ನು ನಿಮ್ಮ ಖುಷಿ ಅಂತ ಕಂಡು, ನನ್ನನ್ನ ಮುಂದೆ ಕಳಿಸಿ ನೀವು ಹಿಂದೆ ನಿಂತಿದ್ದೀರ” ಎಂದು ರಾಜ್ ಅವರ ವ್ಯಕ್ತಿತ್ವವನ್ನು ಅನಿರುದ್ಧ್ ಕೊಂಡಾಡಿದ್ದಾರೆ.

ಅಂತಿಮವಾಗಿ ಅವರು “ಸಿನಿಮಾ ಯಾರಿಂದ ಬೇಕಾದರೂ ಕಲಿಯಬಹುದು. ಆದರೆ ಒಬ್ಬ ಒಳ್ಳೆಯ ಮನುಷ್ಯನಾಗುವುದು, ನಿಷ್ಕಲ್ಮಶವಾಗಿರುವುದು, ಪ್ರೀತಿಯೇ ಆಗಿರುವುದು ಹೇಗೆ ಅನ್ನೋದನ್ನ ನಿಮ್ಮಿಂದ ಸ್ವಲ್ಪ ಕಲಿತೆ” ಎಂದು ಮನದಾಳದ ಮಾತು ಹೇಳಿದ್ದಾರೆ.

ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ ಬಿ ಶೆಟ್ಟಿ ಅವರ ವ್ಯಕ್ತಿತ್ವದ ಮತ್ತೊಂದು ಮುಖವನ್ನು ಅಭಿಮಾನಿಗಳಿಗೆ ಪರಿಚಯಿಸಿದೆ. ಸಿನಿಮಾ ಯಶಸ್ಸಿನ ಜೊತೆಗೆ ಮಾನವೀಯತೆಯ ಗೆಲುವೂ ಇಲ್ಲಿ ಕಂಡುಬಂದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-12 15:13:36
No Reviews