ಪೊಲೀಸ್‌ ಠಾಣೆಯಲ್ಲಿ ಶಾಕ್: ಪಿಎಸ್‌ಐ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು ಮೂಲದ ವ್ಯಕ್ತಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತುಮಕೂರು ಗ್ರಾಮಾಂತರ ಠಾಣೆ ಪಿಎಸ್‌ಐ ಚೇತನ್ ಕುಮಾರ್, ಮೊದಲಿಗೆ ₹1 ಲಕ್ಷ ಬೇಡಿಕೆ ಇಟ್ಟು ನಂತರ ₹40 ಸಾವಿರಕ್ಕೆ ಒಪ್ಪಿಕೊಂಡಿದ್ದರು. ಟೋಲ್ ಬಳಿ ಇರುವ ಅಂಗಡಿಯಲ್ಲಿ ಹಣ ನೀಡುವಂತೆ ಸೂಚಿಸಿ, ಹಣ ತರುವ ವ್ಯಕ್ತಿಯ ಫೋಟೋವನ್ನೇ ಅಂಗಡಿಯವರಿಗೆ ಕಳುಹಿಸಿದ್ದ ಪಿಎಸ್‌ಐ ಪಾತ್ರ, ಮೊಬೈಲ್ ಪರಿಶೀಲನೆಯ ವೇಳೆ ಬಹಿರಂಗವಾಗಿದ್ದು, ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಸದ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.

ಇದೇ ವೇಳೆ, ಲಂಚ ಪ್ರಕರಣದ ಇನ್ನೊಂದು ಶಾಕ್ ಸಂಗತಿ ಬೆಂಗಳೂರಿನಲ್ಲೂ ನಡೆದಿತ್ತು. ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು, ವಂಚನೆ ಪ್ರಕರಣವೊಂದನ್ನು ಡೀಲ್ ಮಾಡುವ ನೆಪದಲ್ಲಿ ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಈಗಾಗಲೇ ₹1 ಲಕ್ಷ ಪಡೆದ ಬಳಿಕ ಉಳಿದ ಹಣ ಪಡೆಯಲು ಚಾಮರಾಜಪೇಟೆಯ ಸಿಎಆರ್ ಮೈದಾನಕ್ಕೆ ಬಂದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದರು. ಟ್ರ್ಯಾಪ್ ವೇಳೆ ಅವರು ಕೂಗಾಡಿ ಹೈಡ್ರಾಮಾ ಸೃಷ್ಟಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಖಾಕಿಗೆ ಮತ್ತೊಮ್ಮೆ ಭಾರಿ ಕಳಂಕ ತಂದಿದೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-31 17:35:42
No Reviews