ಗೆಲುವಿನ ಬಳಿಕ ಮನೀಷ್ ಪಾಂಡೆ ಭಾವುಕ ಹೇಳಿಕೆ

ಐಪಿಎಲ್‌ 2026ರಲ್ಲಿ ಅವಕಾಶಕ್ಕಾಗಿ ಕಾದಿದ್ದ ಕನ್ನಡಿಗ ಮನೀಷ್‌ ಪಾಂಡೆ, ಕೊನೆಗೂ ಸಿಕ್ಕ ಚಾನ್ಸ್‌ ಅನ್ನು ಅದ್ಭುತವಾಗಿ ಬಳಸಿಕೊಂಡರು. ಮುಂಬೈ ಇಂಡಿಯನ್ಸ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 33 ಎಸೆತಗಳಲ್ಲಿ 45 ರನ್‌ ಸಿಡಿಸಿ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಅಮೂಲ್ಯ ಗೆಲುವು ತಂದುಕೊಟ್ಟ ಅವರು, ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಒತ್ತಡದ ಕ್ಷಣದಲ್ಲಿ ಅಜಿಂಕ್ಯ ರಹಾನೆ ಹಾಗೂ ರೊವ್ಮನ್‌ ಪೊವೆಲ್‌ ಜೊತೆ ಕಟ್ಟಿದ ಜೊತೆಯಾಟ ಕೆಕೆಆರ್‌ ಪ್ಲೇಆಫ್ಸ್‌ ಕನಸನ್ನು ಜೀವಂತವಾಗಿರಿಸಿದೆ.

ಈ ಸೀಸನ್‌ನಲ್ಲಿ ಬಹುತೇಕ ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದ ಮನೀಷ್‌, ಸಿಕ್ಕ ಕೆಲವೇ ಅವಕಾಶಗಳಲ್ಲಿ ತಮ್ಮ ಅನುಭವವನ್ನು ಸಾಬೀತುಪಡಿಸಿದ್ದರು. ಆರ್‌ಸಿಬಿ ವಿರುದ್ಧ ಬ್ಯಾಟಿಂಗ್‌ ಅವಕಾಶ ಸಿಗದಿದ್ದರೂ, ಟಿಮ್‌ ಡೇವಿಡ್‌ ಕ್ಯಾಚ್‌ ಹಿಡಿದು ಎಲ್ಲರ ಗಮನ ಸೆಳೆದಿದ್ದರು. ಇದೀಗ ಮುಂಬೈ ವಿರುದ್ಧ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ ಆಡಿದ ಬಳಿಕ, “ಈ ಕಾರಣದಿಂದಲೇ ನಾನು ಇನ್ನೂ ಇಲ್ಲಿದ್ದೇನೆ” ಎಂದು ಭಾವುಕರಾಗಿ ಹೇಳಿದ್ದಾರೆ.

ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಅವರು, “ಈ ಸೀಸನ್‌ನಲ್ಲಿ ಇದೇ ಮೊದಲ ಬಾರಿ ಸಂಪೂರ್ಣವಾಗಿ ಬ್ಯಾಟ್‌ ಮಾಡಲು ಅವಕಾಶ ಸಿಕ್ಕಿತು. ಆರಂಭದ ನಾಲ್ಕು ಪಂದ್ಯಗಳಲ್ಲಿ ಪ್ಯಾಡ್‌ ಹಾಕಿಕೊಂಡೇ ಕುಳಿತಿದ್ದೆ. ಆದರೆ ಈ ಇನಿಂಗ್ಸ್‌ ನನಗೆ ತುಂಬಾ ವಿಶೇಷ. ನಾನು ಕ್ರೀಸ್‌ನಲ್ಲಿ ಹೆಚ್ಚು ಸಮಯ ಉಳಿದು ತಂಡವನ್ನು ಗೆಲುವಿನತ್ತ ಕೊಂಡೊಯ್ಯಬೇಕು ಎಂದುಕೊಂಡಿದ್ದೆ, ಕೊನೆಗೆ ಅದು ಸಾಧ್ಯವಾಯಿತು,” ಎಂದು ಸಂತಸ ಹಂಚಿಕೊಂಡರು.

“ನಾನು ನಿರಂತರವಾಗಿ ಪಂದ್ಯಗಳಲ್ಲಿ ಆಡದಿದ್ದರೂ, ಈ ತಂಡದ ಭಾಗವಾಗಿರುವುದೇ ನನಗೆ ದೊಡ್ಡ ವಿಷಯ. ತಂಡದ ಯಾರಿಗಾದರೂ ನನ್ನ ಸಹಾಯ ಬೇಕಿದ್ದರೆ, ನಾನು ಯಾವಾಗಲೂ ಸಿದ್ಧನಿದ್ದೆ. ಈ ಸಂಪೂರ್ಣ ಟೂರ್ನಿಯಲ್ಲಿ ಅದನ್ನೇ ಮಾಡಿದ್ದೇನೆ,” ಎಂದು ಮನೀಷ್‌ ಪಾಂಡೆ ಹೇಳಿದ್ದು, ಅವರ ತಂಡದ ಮೇಲಿನ ಬದ್ಧತೆ ಹಾಗೂ ಸಮರ್ಪಣೆಯನ್ನು ತೋರಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-21 18:39:17
No Reviews