ನೀಟ್ ಸೋರಿಕೆ ವಿವಾದ: ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದ ಸಿಎಂ

ಬೆಂಗಳೂರು: ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ NEET-UG 2026 ಪರೀಕ್ಷೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಇದನ್ನು ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲ, ದೇಶದ ಯುವಜನತೆಗೆ ಬಗೆದ ಕ್ರೂರ ದ್ರೋಹ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಸೇರಿ ದೇಶದಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶ್ರಮಪಟ್ಟು ಪರೀಕ್ಷೆ ಬರೆದಿದ್ದರು. ಪೋಷಕರು ಸಹ ಮಕ್ಕಳ ಭವಿಷ್ಯಕ್ಕಾಗಿ ತರಬೇತಿ ಮತ್ತು ಪ್ರಯಾಣಕ್ಕೆ ದೊಡ್ಡ ವೆಚ್ಚ ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರದ ನಿರ್ಧಾರ ವಿದ್ಯಾರ್ಥಿಗಳ ಬದುಕನ್ನು ಅನಿಶ್ಚಿತತೆ ಮತ್ತು ಆತಂಕಕ್ಕೆ ತಳ್ಳಿದೆ ಎಂದು ಹೇಳಿದರು.

ನೀಟ್ ವ್ಯವಸ್ಥೆಯ ಕುರಿತು 2024ರಲ್ಲೇ ನಮ್ಮ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಸದನದಲ್ಲಿ ನಿರ್ಣಯ ಕೈಗೊಂಡಿದ್ದನ್ನು ಅವರು ನೆನಪಿಸಿದರು. ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಇದು ಅನ್ಯಾಯವಾಗುತ್ತದೆ ಎಂಬ ನಮ್ಮ ಕಾಳಜಿ ಇಂದು ಸಾಬೀತಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಪೇಪರ್ ಲೀಕ್ ಪ್ರಕರಣಗಳು ನೇಮಕಾತಿ ಪರೀಕ್ಷೆಗಳಿಂದ ಹಿಡಿದು ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳವರೆಗೆ ವ್ಯಾಪಿಸಿರುವುದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ ಸಿಎಂ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ವಿಷಯದಲ್ಲಿ ಮೌನ ವಹಿಸಿರುವುದನ್ನೂ ಟೀಕಿಸಿದರು. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದ ಕುರಿತು ಪಾರದರ್ಶಕ ಮತ್ತು ಕಾಲಮಿತಿಯ ತನಿಖೆ ನಡೆಸಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಹೊಸ ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ತಕ್ಷಣ ಸ್ಪಷ್ಟನೆ ನೀಡಬೇಕು ಎಂದು ಸಿಎಂ ಒತ್ತಾಯಿಸಿದರು. ಜೊತೆಗೆ, ಪ್ರವೇಶ ಪರೀಕ್ಷೆಗಳನ್ನು ನಡೆಸುವ ರಾಜ್ಯಗಳ ಅಧಿಕಾರವನ್ನು ಪುನಃಸ್ಥಾಪಿಸಬೇಕೆಂದು ಅವರು ಆಗ್ರಹಿಸಿದರು.

ಕೊನೆಗೆ, ಪೇಪರ್ ಲೀಕ್‌ನಿಂದ ಸಂಕಷ್ಟಕ್ಕೀಡಾದ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪೋಷಕರ ಜೊತೆಯಲ್ಲಿದ್ದೇವೆ ಎಂದು ಹೇಳಿದ ಸಿಎಂ, ಅವರ ಪರಿಶ್ರಮಕ್ಕೆ ನ್ಯಾಯ ಸಿಗಬೇಕು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-14 17:41:20
No Reviews