ನಾನು ಒಳ್ಳೆಯ ಮಗನಾ ನಲಪಾಡ್ ಪ್ರಶ್ನೆ

ಬಿಟ್‌ಕಾಯಿನ್ ಹಗರಣದ ಆರೋಪದ ಹಿನ್ನೆಲೆ ನಡೆದ ಇಡಿ ದಾಳಿ ಕುರಿತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ನನ್ನ ತಂದೆ-ತಾಯಿಗೆ ಒಳ್ಳೆಯ ಮಗನಾಗಲು ಸಾಧ್ಯವಾಗಲಿಲ್ಲ. ಅವರಿಗೆ ಯಾವಾಗಲೂ ನನ್ನಿಂದ ಕೆಟ್ಟದ್ದೇ ಆಗಿದೆ. ಆದರೂ ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿ, ಅವರಿಗೆ ಒಳ್ಳೆಯ ಹೆಸರು ತರುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ನಮ್ಮನ್ನು ಗುರಿಯಾಗಿಸಿ ಈ ಪ್ರಕರಣ ಎಳೆಯಲಾಗುತ್ತಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದು ತಮ್ಮ ತಂದೆ ಶಾಸಕ ಎನ್.ಎ. ಹ್ಯಾರಿಸ್ ವಿರುದ್ಧದ ಕ್ರಮವಲ್ಲ, ತಮಗೂ ಸಹೋದರ ಉಮರ್ ಹ್ಯಾರಿಸ್ ನಲಪಾಡ್‌ಗೂ ಉದ್ದೇಶಿತ ದಾಳಿ ಎಂದು ಅವರು ಆರೋಪಿಸಿದರು. “ತಂದೆಗೆ ಮಂತ್ರಿ ಸ್ಥಾನ ಸಿಗದಂತೆ ಮಾಡಲು ರಾಜಕೀಯ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ” ಎಂದು ಹೇಳಿದರು. 2021ರಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಇಷ್ಟು ವರ್ಷಗಳ ಬಳಿಕ ಕೈಗೊಳ್ಳುವುದು ಏಕೆ ಎಂದು ಪ್ರಶ್ನಿಸಿದ ಅವರು, “ಯಾರಾದರೂ ತಪ್ಪು ಮಾಡಿದರೆ ಆರು ವರ್ಷಗಳ ಕಾಲ ಕಾಯುತ್ತಾರೆಯೇ?” ಎಂದು ಆಕ್ಷೇಪಿಸಿದರು.

ಈ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ಆಡಳಿತ ಪಕ್ಷದಿಂದ ತಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿದೆ ಎಂದು ನಲಪಾಡ್ ಆರೋಪಿಸಿದರು. 2020ರಲ್ಲಿ ಇದೇ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಲಾಗಿತ್ತು, ಎಸ್ಐಟಿ ತನಿಖೆಯಲ್ಲಿಯೂ ಏನೂ ಪತ್ತೆಯಾಗಿರಲಿಲ್ಲ ಎಂದರು. 21 ಗಂಟೆಗಳ ಕಾಲ ನಡೆದ ಶೋಧದಲ್ಲಿ ಕೇವಲ ಎರಡು ಮೊಬೈಲ್‌ಗಳನ್ನು ಮಾತ್ರ ವಶಪಡಿಸಿಕೊಂಡಿದ್ದು, ಯಾವುದೇ ಹಣ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-21 18:54:18
No Reviews