ಮೆಡಿಕಲ್‌ ಸೀಟಿಗಾಗಿ ಕಾಲು ತ್ಯಾಗ: ಪ್ರಮಾಣಪತ್ರದ ಹುಚ್ಚಾಟ!

ಲೈನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾಲಿಪುರ ನಿವಾಸಿಯಾದ ಸೂರಜ್ ಭಾಸ್ಕರ್‌ ಸಂಬಂಧಿಸಿದ ಈ ಘಟನೆ ಜನವರಿ 18ರಂದು ನಡೆದಿದ್ದರೂ, ಆರಂಭದಲ್ಲಿ ಇದನ್ನು ಹಲ್ಲೆ ಪ್ರಕರಣವೆಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರು ನಡೆಸಿದ ಆಳವಾದ ತನಿಖೆಯಲ್ಲಿ, ಜನವರಿ 23ರಂದು ಅಚ್ಚರಿ ಮೂಡಿಸುವ ಸತ್ಯ ಬಹಿರಂಗವಾಗಿದೆ.

ಪೊಲೀಸರ ಪ್ರಕಾರ, ನೀಟ್‌ ಮೂಲಕ ವೈದ್ಯಕೀಯ ಪ್ರವೇಶಕ್ಕೆ ಅಂಗವೈಕಲ್ಯ ಪ್ರಮಾಣಪತ್ರದ ರಿಯಾಯಿತಿ ಪಡೆಯುವ ಉದ್ದೇಶದಿಂದ ಸೂರಜ್ ತನ್ನ ಪಾದದ ಒಂದು ಭಾಗವನ್ನೇ ಕತ್ತರಿಸಿಕೊಂಡಿದ್ದಾನೆ. ಡಿಪ್ಲೊಮಾ ಇನ್ ಫಾರ್ಮಸಿ (ಡಿ.ಫಾರ್ಮ್) ಪೂರ್ಣಗೊಳಿಸಿರುವ ಸೂರಜ್, ಎಂಬಿಬಿಎಸ್‌ಗೆ ಪ್ರವೇಶ ಪಡೆಯಲು ನೀಟ್‌ಗೆ ತಯಾರಿ ನಡೆಸುತ್ತಿದ್ದ. ಕಡಿಮೆ ಅಂಕಗಳಲ್ಲಿಯೇ ಸೀಟ್‌ ಸಿಗಲೆಂಬ ಆಸೆಯೇ ಈ ಅತಿರೇಕದ ನಿರ್ಧಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಆರಂಭದಲ್ಲಿ ತನ್ನ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ ಎಂದು ಸೂರಜ್ ದೂರು ನೀಡಿದ್ದರಿಂದ, ಕೊಲೆ ಯತ್ನದ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ಪ್ರಜ್ಞೆ ಬಂದಾಗ ಎಡಗಾಲು ಕತ್ತರಿಸಲ್ಪಟ್ಟಿತ್ತು, ಹಿಮ್ಮಡಿ ಮಾತ್ರ ಉಳಿದಿತ್ತು ಎಂದು ಆತ ಪೊಲೀಸರಿಗೆ ತಿಳಿಸಿದ್ದ. ಆದರೆ ವಿಚಾರಣೆಯ ವೇಳೆ ಅವನು ಪದೇಪದೇ ಹೇಳಿಕೆ ಬದಲಾಯಿಸುತ್ತಿದ್ದರಿಂದ ತನಿಖಾಧಿಕಾರಿಗಳಿಗೆ ಅನುಮಾನ ಬಲವಾಯಿತು.

ತನಿಖೆಯ ಭಾಗವಾಗಿ ಕರೆ ವಿವರಗಳ ಪರಿಶೀಲನೆ ಹಾಗೂ ಅವನು ಮದುವೆಯಾಗಲು ಉದ್ದೇಶಿಸಿದ್ದ ಯುವತಿಯ ವಿಚಾರಣೆ ನಡೆಸಲಾಯಿತು. ಆಕೆ, 2026ರಲ್ಲಿ ಯಾವ ಬೆಲೆ ತೆತ್ತಾದರೂ ಎಂಬಿಬಿಎಸ್ ಪ್ರವೇಶ ಪಡೆಯಲು ಸೂರಜ್ ದೃಢ ನಿರ್ಧಾರ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾಳೆ. ಸದ್ಯ ಸೂರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-23 18:02:14
No Reviews