‘ಲ್ಯಾಂಡ್ಲಾರ್ಡ್’ ಸಿನಿಮಾಗೆ ಸರ್ಕಾರದ ಬೆಂಬಲ: ತೆರಿಗೆ ವಿನಾಯಿತಿ ಘೋಷಿಸಿದ್ರಾ ಸಿದ್ದರಾಮಯ್ಯ

ಬಿಡುಗಡೆಯಾದ ಕೂಡಲೇ ಈ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಸರ್ಕಾರದ ಬೆಂಬಲವೂ ಲಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಲ್ಯಾಂಡ್ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸೂಚನೆ ನೀಡಿದ್ದಾರೆ.

ಈ ಬೆಳವಣಿಗೆಯಿಂದಾಗಿ ಸಿನಿಮಾ ಇನ್ನಷ್ಟು ಜನರಿಗೆ ತಲುಪಲು ಸಹಕಾರಿಯಾಗಲಿದೆ. ತೆರಿಗೆ ವಿನಾಯಿತಿ ಸಿಗುವುದರಿಂದ ಟಿಕೆಟ್ ದರ ಕಡಿಮೆಯಾಗುವ ಸಾಧ್ಯತೆ ಇದ್ದು, ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

‘ಲ್ಯಾಂಡ್ಲಾರ್ಡ್’ ಸಿನಿಮಾ 70ರ ದಶಕದ ಹಿನ್ನೆಲೆಯನ್ನು ಹೊಂದಿದೆ. ರಾಚಯ್ಯ (ದುನಿಯಾ ವಿಜಯ್) ಅವರು ಪತ್ನಿ ನಿಂಗವ್ವ (ರಚಿತಾ ರಾಮ್) ಹಾಗೂ ಮಗಳು ಭಾಗ್ಯಾ (ರಿತನ್ಯಾ ರಾಮ್) ಜೊತೆ ಸರಳ ಜೀವನ ನಡೆಸುತ್ತಿರುತ್ತಾರೆ. ಆದರೆ ಆ ಊರಿನಲ್ಲಿ ಸಣ್ಣ ಧಣಿ (ರಾಜ್ ಬಿ. ಶೆಟ್ಟಿ) ಪಾರುಪತ್ಯ ನಡೆದುಕೊಂಡು ಬರುತ್ತದೆ. ಯಾರಿಗೂ ಜಮೀನು ಇರಬಾರದು, ತಾವೇ ಬೆಳೆದ ಬೆಳೆಯಲ್ಲಿ ಕೇವಲ ಒಂದು ಹಿಡಿ ಮಾತ್ರ ಸಿಗಬೇಕು ಎಂಬ ಆತನ ಆಜ್ಞೆಗೆ ಊರು ಬಗ್ಗಿರುತ್ತದೆ. ಈ ಅಸಮಾನತೆಯನ್ನು ಪ್ರಶ್ನಿಸಿದ ಭಾಗ್ಯಾಳ ಪ್ರಿಯಕರನನ್ನು ಸುಟ್ಟು ಕೊಲ್ಲಲಾಗುತ್ತದೆ. ಇದರಿಂದ ಕೋಪಗೊಂಡ ರಾಚಯ್ಯ ಅನ್ಯಾಯದ ವಿರುದ್ಧ ಸಿಡಿದೇಳುತ್ತಾರೆ. ಈ ಕಥಾನಕವೇ ಚಿತ್ರದ ಹೃದಯವಾಗಿದೆ.

ಈ ಚಿತ್ರವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ದುನಿಯಾ ವಿಜಯ್ ಹಾಗೂ ನಿರ್ದೇಶಕ ಜಡೇಶ್ ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಆಗ ಸಿನಿಮಾ ವೀಕ್ಷಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದರು. ಇದೀಗ ಸಂಬಂಧಪಟ್ಟ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದ್ದಾರೆ.

‘ಲ್ಯಾಂಡ್ಲಾರ್ಡ್’ ಸಿನಿಮಾ ಜನವರಿ 23ರಂದು ಬಿಡುಗಡೆಯಾಗಿದ್ದು, ಬುಕ್ ಮೈ ಶೋನಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿ ರೇಟಿಂಗ್ ನೀಡಿದ್ದಾರೆ. ಈ ಚಿತ್ರಕ್ಕೆ 9.4/10 ರೇಟಿಂಗ್ ದೊರೆತಿದೆ. ದುನಿಯಾ ವಿಜಯ್, ರಚಿತಾ ರಾಮ್ ಮತ್ತು ರಾಜ್ ಬಿ. ಶೆಟ್ಟಿ ಅವರ ಅಭಿನಯವನ್ನು ಪ್ರೇಕ್ಷಕರು ಕೊಂಡಾಡಿದ್ದಾರೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಅವರ ಮಗಳು ರಿತನ್ಯಾ ರಾಮ್ ಚಿತ್ರರಂಗಕ್ಕೆ ಕಾಲಿಟ್ಟಿರುವುದು ಮತ್ತೊಂದು ವಿಶೇಷವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-03 19:25:29
No Reviews