ಬೆಂಗಳೂರು ಎಚ್ಚರಿಕೆ! ಇಂದು–ನಾಳೆ ಈ ಪ್ರದೇಶಗಳಲ್ಲಿ ಕಾವೇರಿ ನೀರು ಬಂದ್

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವತಿಯಿಂದ 1200 ಎಂಎಂ, 900 ಎಂಎಂ ಹಾಗೂ 700 ಎಂಎಂ ವ್ಯಾಸದ ನೀರು ಸರಬರಾಜು ಪೈಪ್‌ಲೈನ್‌ ಅಳವಡಿಕೆ ಸಂಬಂಧ ತುರ್ತು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದ ಕಾವೇರಿ ನೀರು ಸರಬರಾಜು ಯೋಜನೆಯ ಮೊದಲ ಮತ್ತು ಎರಡನೇ ಹಂತಗಳ ಜಲರೇಚಕ ಯಂತ್ರಗಾರಗಳನ್ನು ಫೆಬ್ರವರಿ 5 (ಗುರುವಾರ) ಬೆಳಿಗ್ಗೆ 6ರಿಂದ ಫೆಬ್ರವರಿ 6 (ಶುಕ್ರವಾರ) ಬೆಳಿಗ್ಗೆ 6ರವರೆಗೆ ಒಟ್ಟು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ.

ಈ ಅವಧಿಯಲ್ಲಿ ಎ.ಜಿ.ಎಸ್ ಬಡಾವಣೆ, ಸುಬ್ರಮಣ್ಯಪುರ, ಮಡಿವಾಳ, ಚಿನ್ನಮ್ಮ ಲೇಔಟ್‌, ಕೋರಮಂಗಲ (2ರಿಂದ 8ನೇ ಬ್ಲಾಕ್‌), ಚಿಕ್ಕಆಡುಗೋಡಿ, ಸೆಂಟ್‌ ಜಾನ್‌ ಆಸ್ಪತ್ರೆ ಸುತ್ತಮುತ್ತ, ಶಾಂತಿನಗರ, ಎಂಜಿ ರಸ್ತೆ, ರಿಚ್‌ಮಂಡ್‌ ಟೌನ್‌, ಆಸ್ಟಿನ್‌ ಟೌನ್‌, ವಿವೇಕ್‌ ನಗರ, ಈಜಿಪುರ, ದೊಮ್ಮಲೂರು, ಕೋಡಿಹಳ್ಳಿ, ಚಾಮರಾಜಪೇಟೆ, ಶ್ರೀನಗರ, ಬಿಎಸ್‌ಕೆ 1ನೇ ಹಂತ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಇದೇ ವೇಳೆ ಫೆಬ್ರವರಿ 6 ಮತ್ತು 7ರಂದು ಮಾಗಡಿ ರಸ್ತೆ, ಬನಶಂಕರಿ, ಜಯನಗರ, ಜೆಪಿ ನಗರ, ಕುಮಾರಸ್ವಾಮಿ ಬಡಾವಣೆ, ಉತ್ತರಹಳ್ಳಿ, ಕನಕಪುರ ರಸ್ತೆ, ವಿಲ್ಸನ್ ಗಾರ್ಡನ್‌, ನಿಮಾನ್ಸ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲೂ ವ್ಯತ್ಯಯ ಸಂಭವಿಸುವ ಸಾಧ್ಯತೆ ಇದೆ.

ನಾಗರಿಕರು ಮುಂಜಾಗ್ರತೆಯಾಗಿ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಕೊಂಡು ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-05 09:41:35
No Reviews