ಸರ್ಕಾರಿ ಶಾಲಾ ಶಿಕ್ಷಕರ ಮಗಳು ರಾಜ್ಯಕ್ಕೆ ಪ್ರಥಮ

ಬೆಳಗಾವಿ, ಏ.23: ಕರ್ನಾಟಕ ಎಸ್‌ಎಸ್‌ಎಲ್‌ಸಿ 2025-26ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಇವರಲ್ಲಿ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಬಿರಾದಾರ ವಿಶೇಷ ಗಮನ ಸೆಳೆದಿದ್ದಾರೆ.

ಚಿಕ್ಕೋಡಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ನಿವಾಸಿ ಪ್ರಾರ್ಥನಾ, ಸರ್ಕಾರಿ ಶಾಲೆಯಲ್ಲೇ ಓದಿ ರಾಜ್ಯ ಟಾಪರ್ ಆಗಿರುವುದು ಹೆಮ್ಮೆಯ ವಿಷಯವಾಗಿದೆ. ಆಕೆಯ ತಂದೆ ನಾಗಪ್ಪ ಬಿರಾದಾರ ಅವರು ಅದೇ ಗ್ರಾಮದ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮಗಳನ್ನು ತಮ್ಮ ಶಾಲೆಯಲ್ಲೇ ಶಿಕ್ಷಣ ನೀಡಿ ಮಾರ್ಗದರ್ಶನ ಮಾಡಿದ್ದಾರೆ.

ಸಾಮಾನ್ಯವಾಗಿ ಸರ್ಕಾರಿ ಶಾಲೆಗಳ ಬಗ್ಗೆ ಇರುವ ಕಲ್ಪನೆಯನ್ನು ಮುರಿದು, ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಪ್ರಾರ್ಥನಾ ತನ್ನ ಫಲಿತಾಂಶದ ಮೂಲಕ ಸಾಬೀತುಪಡಿಸಿದ್ದಾಳೆ. 1ನೇ ತರಗತಿಯಿಂದಲೇ ಸರ್ಕಾರಿ ಶಾಲೆಯಲ್ಲೇ ಓದಿ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದಿಂದ ಈ ಶ್ರೇಷ್ಠ ಸಾಧನೆ ಸಾಧ್ಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಾರ್ಥನಾ, “ಎಲ್ಲ ಶಿಕ್ಷಕರು ನನಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಪೋಷಕರ ಬೆಂಬಲವೇ ನನ್ನ ಯಶಸ್ಸಿಗೆ ಕಾರಣ” ಎಂದು ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ಒಟ್ಟು ಶೇಕಡಾ 94.10 ಫಲಿತಾಂಶ ದಾಖಲಾಗಿದ್ದು, ಉಳಿದ ಆರು ಟಾಪರ್‌ಗಳು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಾಗಿದ್ದಾರೆ. ಪ್ರಾರ್ಥನಾ ಬಿರಾದಾರ ಅವರ ಸಾಧನೆ ಸರ್ಕಾರಿ ಶಾಲೆಗಳಿಗೂ ಗೌರವ ತಂದುಕೊಟ್ಟಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-23 18:00:25
No Reviews