“RCB ಕಪ್ ಗೆದ್ದರೂ ಸಂಭ್ರಮಾಚರಣೆ ನಿರ್ಬಂಧ – ಪೊಲೀಸರ ಎಚ್ಚರಿಕೆ”

ಬೆಂಗಳೂರು, ಮೇ 30: ಐಪಿಎಲ್ 2026ರ (IPL 2026 final) ಮಹತ್ವದ ಫೈನಲ್ ಪಂದ್ಯ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಆದರೆ ಈ ಹೈವೋಲ್ಟೇಜ್ ಫೈನಲ್‌ಗೆ ಮುನ್ನವೇ ಆರ್‌ಸಿಬಿ ಅಭಿಮಾನಿಗಳಿಗೆ ಪೊಲೀಸರು ಕಠಿಣ ನಿರ್ಬಂಧಗಳನ್ನು ಜಾರಿಗೆ ತಂದಿದ್ದಾರೆ.

ಕಳೆದ ಬಾರಿಯ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟ ದುರಂತ ಇನ್ನೂ ಜನಮನದಲ್ಲಿ ತಾಜಾ ಆಗಿರುವ ಹಿನ್ನೆಲೆಯಲ್ಲಿ, ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಜಯೋತ್ಸವದ ಹೆಸರಿನಲ್ಲಿ ಮತ್ತೆ ಅವಘಡಗಳು ಸಂಭವಿಸದಂತೆ ಪೊಲೀಸರು ಸಾರ್ವಜನಿಕರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.

ಪೊಲೀಸರ ಪ್ರಮುಖ ಸೂಚನೆಗಳು:

  • ಪಂದ್ಯದ ಫಲಿತಾಂಶದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ

  • ಪಟಾಕಿ ಸಿಡಿಸುವುದು ಹಾಗೂ ಅಪಾಯಕಾರಿ ವಸ್ತುಗಳ ಬಳಕೆ ಸಂಪೂರ್ಣ ನಿಷೇಧ

  • ಸಂಚಾರ ಪೊಲೀಸರ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು

  • ಬೈಕ್ ರ್‍ಯಾಲಿ, ಅತಿವೇಗ ಚಾಲನೆ, ಸ್ಟಂಟ್ ಮತ್ತು ರಸ್ತೆ ತಡೆಗಳಿಗೆ ನಿಷೇಧ

  • ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಅಥವಾ ದ್ವೇಷಪೂರಿತ ಪೋಸ್ಟ್‌ಗಳಿಗೆ ಬ್ರೇಕ್

  • ಇತರ ತಂಡದ ಅಭಿಮಾನಿಗಳನ್ನು ಪ್ರಚೋದಿಸುವ ಅಥವಾ ಅವಮಾನಿಸುವ ವರ್ತನೆಗೆ ಅವಕಾಶ ಇಲ್ಲ

  • ಅನುಮತಿ ಇಲ್ಲದೆ ರಸ್ತೆಗೆ ಮುಖಮಾಡಿ ಎಲ್‌ಇಡಿ ವಾಲ್ ಅಳವಡಿಸುವುದು ನಿಷೇಧ

ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಅಭಿಮಾನಿಗಳು ಜವಾಬ್ದಾರಿಯಿಂದ ನಡೆದುಕೊಂಡು ನಗರದ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವಂತೆ ಮನವಿ ಮಾಡಲಾಗಿದೆ.

ಇದಕ್ಕೂ ಮುನ್ನ ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಇದೀಗ ಮತ್ತೊಮ್ಮೆ ಫೈನಲ್‌ನಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಬಾರಿ ಟ್ರೋಫಿ ಯಾರ ಕೈ ಸೇರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-30 11:26:10
No Reviews