ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಭಾರಿ ಅಗ್ನಿ ಅವಘಡ ; ಅದೃಷ್ಟವಶಾತ್‌ ತಪ್ಪಿದ ದುರಂತ

ಬೆಂಗಳೂರು: ನಗರದ ಖಾಸಗಿ ಶಾಲೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕ್ಷಣಾರ್ಧದಲ್ಲೇ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶ್ವೇಶ್ವರಯ್ಯ ಲೇಔಟ್ ಸಮೀಪದ ನಾಗದೇವನಹಳ್ಳಿಯ ಚಿತ್ರಕೂಟ ಕೌಶಲ್ಯ ಶಾಲೆಯ ಆಡಿಟೋರಿಯಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಅದು ಮೇಲಿನ ಮಹಡಿಗಳಿಗೂ ವ್ಯಾಪಿಸಿದೆ.

ಮೂಲಗಳ ಪ್ರಕಾರ, ಇಂದು ಪೋಷಕರ ಸಭೆ ನಡೆಯುತ್ತಿದ್ದ ವೇಳೆ 50ಕ್ಕೂ ಹೆಚ್ಚು ಪೋಷಕರು ಶಾಲೆಗೆ ಆಗಮಿಸಿದ್ದರು. ಬೆಳಗ್ಗೆ ಸುಮಾರು 10:15ಕ್ಕೆ ನಾಲ್ಕನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಸಿಬ್ಬಂದಿ ಎಚ್ಚೆತ್ತುಕೊಂಡು ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದಿದ್ದಾರೆ. ನಂತರ ಬೆಂಕಿ ತೀವ್ರಗೊಂಡು ಮೂರನೇ ಮಹಡಿಗೂ ವ್ಯಾಪಿಸಿದೆ.

ಘಟನೆ ನಡೆದ ಸ್ಥಳದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನರು ಆತಂಕದಿಂದ ಜಮಾಯಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಘಟನಾ ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೈಕ್ಷಣಿಕ ವರ್ಷ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ. ಪೋಷಕರ ಸಭೆಯ ವೇಳೆಯೇ ಈ ಅವಘಡ ಸಂಭವಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-30 15:02:35
No Reviews