ಶತಕ ಸಿಡಿಸಿದ ಶುಭಮನ್ ಗಿಲ್: ದಾಖಲೆಗಳ ಸುರಿಮಳೆ

ಮುಲ್ಲನ್‌ಪುರ, ಮೇ 30: ಶುಕ್ರವಾರ ನಡೆದ ಐಪಿಎಲ್ 2026ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಗುಜರಾತ್ ಟೈಟಾನ್ಸ್ ನಾಯಕ ಶುಭ್‌ಮನ್ ಗಿಲ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ. ಈ ಶತಕದೊಂದಿಗೆ ಅವರು ಹಲವು ದಾಖಲೆಗಳ ಸರಣಿಯನ್ನೇ ನಿರ್ಮಿಸಿ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

ಈ ಪಂದ್ಯಕ್ಕೆ ಪ್ರವೇಶಿಸುವ ಮೊದಲು ಗಿಲ್‌ಗೆ ಒಂದೇ ಆವೃತ್ತಿಯಲ್ಲಿ 700 ರನ್ ಪೂರ್ಣಗೊಳಿಸಲು 82 ರನ್ ಅಗತ್ಯವಿತ್ತು. 40 ಎಸೆತಗಳಲ್ಲಿ 82 ರನ್ ಗಳಿಸುವ ವೇಳೆ 12ನೇ ಓವರ್‌ನಲ್ಲಿ ಅವರು ಈ ಮೈಲಿಗಲ್ಲನ್ನು ತಲುಪಿದರು. ಇದರೊಂದಿಗೆ ನಾಯಕನಾಗಿ ಐಪಿಎಲ್‌ನ ಒಂದೇ ಸೀಸನ್‌ನಲ್ಲಿ 700+ ರನ್ ಗಳಿಸಿದ ಎರಡನೇ ಭಾರತೀಯ ಎಂಬ ಸಾಧನೆಗೂ ಪಾತ್ರರಾದರು. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ಅವರು 2016ರಲ್ಲಿ 973 ರನ್ ಗಳಿಸಿದ್ದರು.

ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಒಂದೇ ಆವೃತ್ತಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಗಿಲ್ ಈಗ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ (848 ರನ್ – 2016) ಮತ್ತು ಕೇನ್ ವಿಲಿಯಮ್ಸನ್ (735 ರನ್ – 2018) ಕೂಡ ಸೇರಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿಯೂ ಗಿಲ್ ಮಹತ್ವದ ದಾಖಲೆ ನಿರ್ಮಿಸಿದ್ದಾರೆ. ಒಂದೇ ಟೂರ್ನಮೆಂಟ್‌ನಲ್ಲಿ 700+ ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ಅವರು ಐದನೇ ಸ್ಥಾನ ಪಡೆದಿದ್ದಾರೆ. ಐಪಿಎಲ್ ಹೊರತುಪಡಿಸಿ ಈ ಸಾಧನೆ ಮಾಡಿದ ಏಕೈಕ ಆಟಗಾರ ಜೇಮ್ಸ್ ವಿನ್ಸ್ (710 ರನ್ – 2015 ನ್ಯಾಟ್‌ವೆಸ್ಟ್ ಟಿ20 ಬ್ಲಾಸ್ಟ್).

ಇದಲ್ಲದೆ, ಈ ಶತಕದೊಂದಿಗೆ ಗಿಲ್ ಐಪಿಎಲ್ ಪ್ಲೇಆಫ್‌ನಲ್ಲಿ ಬಹು ಶತಕ ಗಳಿಸಿದ ಮೊದಲ ನಾಯಕ ಎಂಬ ವಿಶಿಷ್ಟ ದಾಖಲೆಗೂ ಪಾತ್ರರಾದರು. ಈ ಹಿಂದೆಯೂ ಅವರು 2023ರ ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಸಿಡಿಸಿದ್ದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-30 11:40:09
No Reviews