ನೌಕರರ ವಜಾಗೆ ಮುನ್ನ ವಿಚಾರಣೆ ಕಡ್ಡಾಯ: ಹೈಕೋರ್ಟ್ ತೀರ್ಪು

ಧಾರವಾಡ: ಸಾರಿಗೆ ಬಸ್ ನೌಕರ ವಜಾ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನೌಕರನ ಮೇಲೆ ಗಂಭೀರ ಆರೋಪಗಳಿದ್ದರೂ ಸೂಕ್ತ ಇಲಾಖಾ ವಿಚಾರಣೆ ನಡೆಸದೆ ಹಾಗೂ ಆತನ ವಾದ ಆಲಿಸದೆ ಸೇವೆಯಿಂದ ವಜಾಗೊಳಿಸುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಭದ್ರತಾ ಸಿಬ್ಬಂದಿಯನ್ನು ವಜಾ ಮಾಡಿದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ಧಾರವಾಡ ಪೀಠ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಜುಕುಮಾರ್ ಅವರು, ನಿಗಮದ ನೌಕರರಾಗಿದ್ದ ತಮ್ಮ ತಂದೆಯ ನಿಧನದ ಬಳಿಕ ಅನುಕಂಪ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು. ನಕಲಿ ಶೈಕ್ಷಣಿಕ ದಾಖಲೆಗಳ ಆರೋಪದ ಮೇರೆಗೆ 2024 ಡಿಸೆಂಬರ್ 13ರಂದು ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ ಏಕಸದಸ್ಯ ಪೀಠ, ಇಂತಹ ಆರೋಪಗಳು ನೌಕರನ ವ್ಯಕ್ತಿತ್ವಕ್ಕೆ ಕಳಂಕ ತರುವುದರಿಂದ ಇಲಾಖಾ ವಿಚಾರಣೆ ನಡೆಸಿ, ತನ್ನ ವಾದ ಮಂಡಿಸಲು ಅವಕಾಶ ನೀಡುವುದು ಕಡ್ಡಾಯ ಎಂದು ಅಭಿಪ್ರಾಯಪಟ್ಟಿದೆ.

ನೌಕರನು ಪ್ರೊಬೇಷನರಿ ಅವಧಿಯಲ್ಲಿದ್ದರೂ, ವಜಾ ಆದೇಶ ಶಿಕ್ಷಾರ್ಹ ಸ್ವರೂಪದ್ದಾಗಿದ್ದರೆ ವಿಚಾರಣೆ ಅನಿವಾರ್ಯ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಅರ್ಜಿದಾರರ ವಜಾ ಆದೇಶವನ್ನು ರದ್ದುಪಡಿಸಿದೆ. ತಕ್ಷಣವೇ ಅವರನ್ನು ಸೇವೆಗೆ ಮರುನೇಮಕ ಮಾಡುವಂತೆ ನಿಗಮಕ್ಕೆ ನಿರ್ದೇಶನ ನೀಡಿರುವ ನ್ಯಾಯಾಲಯ, ಕಾನೂನುಬದ್ಧ ಇಲಾಖಾ ವಿಚಾರಣೆ ನಡೆಸಲು ನಿಗಮಕ್ಕೆ ಸ್ವಾತಂತ್ರ್ಯವಿದೆ ಎಂದು ಸ್ಪಷ್ಟಪಡಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-27 16:11:52
No Reviews