623 ಅಂಕಗಳೊಂದಿಗೆ ಹಾವೇರಿಗೆ ಪ್ರಥಮ ಸ್ಥಾನ ಪಡೆದ ನಿವೇದಿತಾ

ಹಾವೇರಿ, ಏ.23: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಹಾವೇರಿ ಜಿಲ್ಲೆಗೆ ವಿದ್ಯಾರ್ಥಿನಿ ನಿವೇದಿತಾ ಅಜ್ಜಮ್ಮನವರ ಹೆಮ್ಮೆ ತಂದಿದ್ದಾರೆ. 625ಕ್ಕೆ 623 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ರ‍್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ನಿವೇದಿತಾ ಪರಶುರಾಮ ಅಜ್ಜಮ್ಮನವರ, ಜಿಲ್ಲೆಯಲ್ಲೂ ಪ್ರಥಮ ಸ್ಥಾನ ಪಡೆದು ತನ್ನ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೃಷಿಕ ಕುಟುಂಬದಿಂದ ಬಂದಿರುವ ಈ ವಿದ್ಯಾರ್ಥಿನಿ, ಪರಿಶ್ರಮದ ಫಲವಾಗಿ ಈ ಸಾಧನೆ ಮಾಡಿದ್ದಾರೆ.

ಐದು ವಿಷಯಗಳಲ್ಲಿ ಶೇಕಡಾ 100 ಅಂಕಗಳನ್ನು ಪಡೆದಿರುವ ಅವರು, ಸೈನ್ಸ್ ವಿಷಯದಲ್ಲಿ ಕೇವಲ 2 ಅಂಕಗಳ ಅಂತರದಿಂದ ಪೂರ್ಣ ಅಂಕ ತಪ್ಪಿಸಿಕೊಂಡಿದ್ದಾರೆ. ಆದರೂ ಅವರ ಒಟ್ಟು ಸಾಧನೆ ಎಲ್ಲರ ಗಮನ ಸೆಳೆದಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಶೇಕಡಾ 94.10ರಷ್ಟು ಫಲಿತಾಂಶ ದಾಖಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಈ ನಡುವೆ ನಿವೇದಿತಾ ಅವರ ಸಾಧನೆ ಹಾವೇರಿ ಜಿಲ್ಲೆಗೆ ವಿಶೇಷ ಗೌರವ ತಂದುಕೊಟ್ಟಿದೆ.

ನಿವೇದಿತಾ ಸಾಧನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಸೇರಿದಂತೆ ಹಲವು ಗಣ್ಯರು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಗ್ರಾಮ, ತಾಲೂಕು ಮತ್ತು ಜಿಲ್ಲೆಯಾದ್ಯಂತ ಅವರ ಸಾಧನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-23 17:31:50
No Reviews