ಗುಜರಾತ್ ಮಾದರಿ ಟೊಳ್ಳು ಅಭಿವೃದ್ಧಿ: ಸಿದ್ದರಾಮಯ್ಯ ಟೀಕೆ

ತುಮಕೂರು (Tumakuru), ಮೇ 19: ಚುನಾವಣೆ ವೇಳೆ ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯ ಪ್ರಣಾಳಿಕೆ ಸಮಿತಿಯು ಸಿದ್ಧಪಡಿಸಿದ್ದ 580 ಭರವಸೆಗಳಲ್ಲಿ 290ಕ್ಕೂ ಹೆಚ್ಚು ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಉಳಿದ ಭರವಸೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ತುಮಕೂರಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಆಯೋಜಿಸಿದ್ದ “ಮೂರು ವರ್ಷಗಳ ಸಾಧನಾ ಸಮರ್ಪಣಾ” ಸಮಾವೇಶವನ್ನು ಉದ್ಘಾಟಿಸಿದ ಸಿಎಂ, “ನವ ಕರ್ನಾಟಕ” ಅಭಿವೃದ್ಧಿ ಮಾದರಿಯ ವಸ್ತುಪ್ರದರ್ಶನಕ್ಕೂ ಚಾಲನೆ ನೀಡಿದರು. ಜೊತೆಗೆ ಜಿಲ್ಲೆಯಲ್ಲಿ ನಡೆದಿರುವ 682 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

ಸರ್ಕಾರದ ಮೂರು ವರ್ಷದ ಸಾಧನೆಯನ್ನು ವಿವರಿಸಿದ ಅವರು, ಸರ್ವ ಜನರ ಅಭಿವೃದ್ಧಿಗೆ ಒತ್ತು ನೀಡಿರುವುದಾಗಿ ಹೇಳಿ, ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿರುವುದನ್ನು ಪ್ರಮುಖ ಸಾಧನೆಯಾಗಿ ಉಲ್ಲೇಖಿಸಿದರು. “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಕುವೆಂಪು ಅವರ ಕನಸಿನಂತೆ ನಾಡನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.

ರಾಜಕೀಯ ಟೀಕೆಗಳನ್ನು ಪ್ರಸ್ತಾಪಿಸಿದ ಸಿಎಂ, ಬಿಜೆಪಿ ವಿರುದ್ಧ ಕಿಡಿ ಕಾರುತ್ತಾ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕವು “ಗುಜರಾತ್ ಮಾದರಿಯನ್ನು ಮೀರಿಸಿದೆ” ಎಂದು ಹೇಳಿದರು. ತಲಾ ಆದಾಯ, GST ಕೊಡುಗೆ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು ಹಾಗೂ ಶಾಸಕರು ಉಪಸ್ಥಿತರಿದ್ದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-19 18:45:20
No Reviews