ಬೆಂಗಳೂರು ಇವಿ ಶೋರೂಂನಲ್ಲಿ ಭೀಕರ ಬೆಂಕಿ; 400ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲು!

ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಡ: 400ಕ್ಕೂ ಹೆಚ್ಚು ಇವಿ ಬೈಕ್‌ಗಳು ಭಸ್ಮ!

ಬೆಂಗಳೂರು: ನಗರದ ಕೆ.ಆರ್. ಪುರದ ಎನ್‌ಆರ್‌ಐ ಲೇಔಟ್‌ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 400ಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಝೆಪ್ಟೋ, ಸ್ವಿಗ್ಗಿ ಹಾಗೂ ಝೊಮ್ಯಾಟೊ ಡೆಲಿವರಿ ಸಿಬ್ಬಂದಿಗೆ ದಿನಬಾಡಿಗೆ ನೀಡಲಾಗುತ್ತಿದ್ದ ಈ ಇವಿ ಬೈಕ್‌ಗಳು ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ.

ಸಂಜೆ ಸುಮಾರು 7 ಗಂಟೆ ವೇಳೆಗೆ ವಾಹನಗಳನ್ನು ನಿಲ್ಲಿಸಿದ್ದ ಆವರಣದ ಗೇಟ್‌ನ್ನು ಲಾಕ್ ಮಾಡಿದ ಕೆಲವೇ ಹೊತ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಕ್ಷಣಕ್ಕೂ ಬೆಂಕಿ ತೀವ್ರಗತಿಯಲ್ಲಿ ವ್ಯಾಪಿಸಿದ್ದು, ನೂರಾರು ವಾಹನಗಳು ಹೊತ್ತಿ ಉರಿದಿವೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎರಡು ಅಗ್ನಿಶಾಮಕ ವಾಹನಗಳ ನೆರವಿನಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪ್ರಾಥಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಅಗ್ನಿ ಅವಘಡದ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಥಣಿಸಂದ್ರದಲ್ಲೂ ಅಗ್ನಿ ಅವಘಡ

ಇದಕ್ಕೂ ಮುನ್ನ ಬೆಂಗಳೂರಿನ ಥಣಿಸಂದ್ರದ ಕಾರ್ ಗ್ಯಾರೇಜ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಕಾಣಿಸಿಕೊಂಡ ಬೆಂಕಿಗೆ 25ಕ್ಕೂ ಹೆಚ್ಚು ವಾಹನಗಳು ಆಹುತಿಯಾಗಿದ್ದವು. ದುಬಾರಿ ಕಾರುಗಳಿದ್ದ ಗ್ಯಾರೇಜ್‌ನಲ್ಲಿ ಬೆಂಕಿ ವೇಗವಾಗಿ ಹರಡಿದ ಪರಿಣಾಮ ಭಾರೀ ಪ್ರಮಾಣದ ಹಾನಿ ಸಂಭವಿಸಿತ್ತು.

ಬೆಂಕಿ ನಿಯಂತ್ರಣಕ್ಕೆ ತರಲು ಐದು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿದ್ದವು. ಈ ಘಟನೆಯಲ್ಲೂ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, SOCO ತಂಡವು ಸ್ಥಳ ಪರಿಶೀಲನೆ ನಡೆಸಿ ಬೆಂಕಿಯ ನಿಖರ ಕಾರಣದ ಕುರಿತು ವರದಿ ಸಲ್ಲಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರವಾಗಿ ನಡೆಯುತ್ತಿರುವ ಇಂತಹ ಅಗ್ನಿ ಅವಘಡಗಳು ಇವಿ ವಾಹನಗಳ ಸುರಕ್ಷತೆ ಹಾಗೂ ಚಾರ್ಜಿಂಗ್ ವ್ಯವಸ್ಥೆಗಳ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿವೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-08-12 09:55:58
No Reviews