ವಾಣಿಜ್ಯ ಮಂಡಳಿ ಬೇಡಿಕೆಗೆ ಸಿಎಂ ಒಪ್ಪಿಗೆ: ಫಿಲ್ಮ್ ಸಿಟಿ ಅಭಿವೃದ್ಧಿಗೆ ₹500 ಕೋಟಿ, ಕಲಾವಿದರ ವಸತಿ ಯೋಜನೆಗೆ ಭೂಮಿ

ಬೆಂಗಳೂರು: ಕನ್ನಡ ಚಿತ್ರರಂಗದ ಸಮಗ್ರ ಅಭಿವೃದ್ಧಿಗೆ ಹೊಸ ಚಲನಚಿತ್ರ ನೀತಿ ರೂಪಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ನೇತೃತ್ವದ ನಿಯೋಗವು ಮಂಗಳವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚಿತ್ರರಂಗದ ಹಲವು ದೀರ್ಘಕಾಲದ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿತು. ಚಿತ್ರರಂಗದ ಉಳಿವಿಗಾಗಿ ಸಮಗ್ರ ಸಿನಿಮಾ ನೀತಿ, ಸಿನಿಮಾ ಪ್ರಾಚ್ಯಾಗಾರ (ಆರ್ಕೈವ್) ಸ್ಥಾಪನೆ, ಸಹಾಯಧನ ಹೆಚ್ಚಳ, ಸರ್ಕಾರದ ವತಿಯಿಂದ ಪ್ರತ್ಯೇಕ OTT ವೇದಿಕೆ ಆರಂಭ ಹಾಗೂ ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ಕ್ರಮಗಳಿಗೆ ಒತ್ತಾಯಿಸಲಾಯಿತು.

ಏಕಪರದೆ ಚಿತ್ರಮಂದಿರಗಳ ಆಧುನೀಕರಣ, ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಚಿತ್ರಮಂದಿರಗಳಿಗೆ ಪ್ರೋತ್ಸಾಹ, ಹಾಗೂ ಕಲಾವಿದರು–ಕಾರ್ಮಿಕರ ವಸತಿ ಯೋಜನೆಗಾಗಿ ಬಿಡಿಎ ವತಿಯಿಂದ 5 ಎಕರೆ ಭೂಮಿ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. ಬಾಕಿ ಉಳಿದಿರುವ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಚಿತ್ರನಗರಿ’ ಯೋಜನೆಗೆ ಈಗಾಗಲೇ ಘೋಷಿಸಿರುವ ₹500 ಕೋಟಿ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಸಿಎಂ ನಿರ್ದೇಶಿಸಿದ್ದಾರೆ. ಚಿತ್ರರಂಗದ ಉಳಿವಿಗಾಗಿ ಸರ್ಕಾರ ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಇದೇ ವೇಳೆ, 2011ರ ಹಳೆಯ ಚಲನಚಿತ್ರ ನೀತಿಯನ್ನು ನವೀಕರಿಸುವ ಅಗತ್ಯವನ್ನು ಒತ್ತಿ ಹೇಳಲಾಗಿದ್ದು, ಡಿಜಿಟಲ್ ಯುಗಕ್ಕೆ ತಕ್ಕಂತೆ OTT, AI ಬಳಕೆ, ಜಾಗತಿಕ ಮಾರುಕಟ್ಟೆ ವಿಸ್ತರಣೆ ಮತ್ತು ಸಣ್ಣ ಚಿತ್ರಗಳಿಗೆ ಉತ್ತೇಜನ ನೀಡುವ ಹೊಸ ನೀತಿಯ ಅಗತ್ಯವನ್ನು ನಿಯೋಗ ವಿವರಿಸಿದೆ. ರಾಜ್ಯದಲ್ಲಿ ಕಡಿಮೆಯಾಗುತ್ತಿರುವ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಲು ತೆರಿಗೆ ಸೌಲಭ್ಯ ಮತ್ತು ಆರ್ಥಿಕ ನೆರವು ನೀಡುವ ಬೇಡಿಕೆಯೂ ಮುಂದಿಡಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-07-02 12:37:38
No Reviews