ರಾತ್ರಿ ಮಲಗಿದ್ದ ದಿಲೀಪ್ ರಾಜ್ ಏಳಲೇ ಇಲ್ಲ: ಏನಾಯ್ತು?

ಬೆಂಗಳೂರು, ಮೇ 13: ಕನ್ನಡ ಕಿರುತೆರೆ ಹಾಗೂ ಚಿತ್ರರಂಗದ ಬಹುಮುಖ ಪ್ರತಿಭೆ, ನಟ, ನಿರ್ಮಾಪಕ ಮತ್ತು ಕಂಠದಾನ ಕಲಾವಿದ ದಿಲೀಪ್ ರಾಜ್ (48) ನಿಧನದ ಸುದ್ದಿ ಬುಧವಾರ ಬೆಳಗ್ಗೆ ಸಿಡಿಲಿನಂತೆ ಅಪ್ಪಳಿಸಿದೆ. ನಾಯಕನಟ, ಪೋಷಕ ನಟ ಹಾಗೂ ನಿರ್ಮಾಪಕರಾಗಿ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಅವರು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಅಗಲಿಕೆಗೆ ಕಲಾವಿದರು ಹಾಗೂ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ, ರಾತ್ರಿ ನಿದ್ರೆಯಲ್ಲಿದ್ದ ವೇಳೆ ದಿಲೀಪ್ ರಾಜ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಪತ್ನಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ನಂತರ ಪಾರ್ಥೀವ ಶರೀರವನ್ನು ಉತ್ತರಹಳ್ಳಿಯ ನಿವಾಸಕ್ಕೆ ತರಲಾಗಿದ್ದು, ಅಂತಿಮ ದರ್ಶನಕ್ಕೆ ಕಲಾವಿದರು ಹಾಗೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

ದಿಲೀಪ್ ರಾಜ್ ಕೇವಲ ನಟರಲ್ಲ, ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ಪತ್ನಿ ಶ್ರೀವಿದ್ಯಾ ಅವರೊಂದಿಗೆ ಸೇರಿ ಅವರು ನಿರ್ಮಿಸಿದ ‘ಹಿಟ್ಲರ್ ಕಲ್ಯಾಣ’, ‘ಪಾರು’, ‘ನಾ ನಿನ್ನ ಬಿಡಲಾರೆ’, ‘ಕೃಷ್ಣ ರುಕ್ಕು’, ‘ವಿದ್ಯಾ ವಿನಾಯಕ’ ಸೇರಿದಂತೆ ಅನೇಕ ಧಾರಾವಾಹಿಗಳು ಜನಪ್ರಿಯತೆ ಪಡೆದಿವೆ.

ಸ್ಯಾಂಡಲ್‌ವುಡ್‌ನಲ್ಲೂ ತಮ್ಮದೇ ಆದ ಸ್ಥಾನ ಪಡೆದಿದ್ದ ದಿಲೀಪ್ ರಾಜ್, 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ 2007ರ ‘ಮಿಲನ’ ಚಿತ್ರದಲ್ಲಿ ಖಳನಾಯಕ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ‘7 ಓ ಕ್ಲಾಕ್’, ‘ಕ್ಷಣ ಕ್ಷಣ’, ‘ಯು ಟರ್ನ್’, ‘ಅಂಬಿ ನಿಂಗ್ ವಯಸ್ಸಾಯ್ತೋ’, ‘ಕಿಸ್ಮತ್’ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿಯೂ ಅವರ ಅಭಿನಯ ಗಮನ ಸೆಳೆದಿತ್ತು.

ಕಿರುತೆರೆಯಲ್ಲಿ ಅವರ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ಒಂದಾದ ‘ಹಿಟ್ಲರ್ ಕಲ್ಯಾಣ’ದ ಎಜೆ (ಅಭಿರಾಮ್ ಜಯಶಂಕರ್) ಪಾತ್ರ ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಈ ಧಾರಾವಾಹಿಯಲ್ಲಿ ಅವರ ಜೊತೆಯಾಗಿ ರಜನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಿರ್ಮಾಣ ಮತ್ತು ನಟನೆಯ ಎರಡೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.

ದಿಲೀಪ್ ರಾಜ್ ಅವರ ಅಗಲಿಕೆ ಕನ್ನಡ ಕಿರುತೆರೆ ಮತ್ತು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಸ್ಮರಣೆ ಸದಾ ಕಲಾ ಲೋಕದಲ್ಲಿ ಜೀವಂತವಾಗಿರಲಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-13 13:20:46
No Reviews