ಹೃದಯಾಘಾತದಿಂದ ಕಿರುತೆರೆ ನಟ ದಿಲೀಪ್ ರಾಜ್ ನಿಧನ

ಬೆಂಗಳೂರು, ಮೇ 13: ಕಿರುತೆರೆ ಮತ್ತು ಕನ್ನಡ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ನಟ, ನಿರ್ಮಾಪಕ ದಿಲೀಪ್ ರಾಜ್ (48) ಹೃದಯಾಘಾತದಿಂದ ನಿಧನರಾಗಿದ್ದಾರೆ. ಬುಧವಾರ ಮುಂಜಾನೆ ಅವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣವೇ ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

ದಿಲೀಪ್ ರಾಜ್ ಅವರ ಅಗಲಿಕೆ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಆಘಾತದ ಅಲೆ ಎಬ್ಬಿಸಿದ್ದು, ಸಹ ಕಲಾವಿದರು, ನಿರ್ದೇಶಕರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್, 2005ರಲ್ಲಿ ಬಿಡುಗಡೆಯಾದ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. 2007ರ ಪುನೀತ್ ರಾಜ್‌ಕುಮಾರ್ ನಟನೆಯ ‘ಮಿಲನ’ ಚಿತ್ರದಲ್ಲಿನ ಖಳನಾಯಕ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ನಂತರ 2016ರ ‘ಯು ಟರ್ನ್’ ಚಿತ್ರದಲ್ಲಿನ ಅಭಿನಯವೂ ಪ್ರಶಂಸೆಗೆ ಪಾತ್ರವಾಯಿತು. ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿಯೂ ಅವರು ನಟಿಸಿದ್ದರು.

ಕಿರುತೆರೆಯಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದ ದಿಲೀಪ್ ರಾಜ್, ‘ಜನನಿ’, ‘ಅರ್ಧ ಸತ್ಯ’, ‘ರಂಗೋಲಿ’, ‘ಕುಂಕುಮ ಬಾಗ್ಯ’, ‘ಮಾಂಗಲ್ಯ’, ‘ಮಳೆಬಿಲ್ಲು’, ‘ಪ್ರೀತಿಗಾಗಿ’, ‘ಹಿಟ್ಲರ್ ಕಲ್ಯಾಣ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ‘ಹಿಟ್ಲರ್ ಕಲ್ಯಾಣ’, ‘ವಿದ್ಯಾ ವಿನಾಯಕ’, ‘ಪಾರು’, ‘ನಾ ನಿನ್ನ ಬಿಡಲಾರೆ’ ಸೇರಿದಂತೆ ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ.

ಬಹುಮುಖ ಕಲಾವಿದರಾಗಿದ್ದ ದಿಲೀಪ್ ರಾಜ್ ಕೇವಲ ನಟ-ನಿರ್ಮಾಪಕರಷ್ಟೇ ಅಲ್ಲ, ಖ್ಯಾತ ಕಂಠದಾನ ಕಲಾವಿದರೂ ಆಗಿದ್ದರು. ‘ಆ ದಿನಗಳು’ ಚಿತ್ರದ ನಾಯಕ ಚೇತನ್ ಹಾಗೂ ‘ಅಂತು ಇಂತು ಪ್ರೀತಿ ಬಂತು’ ಚಿತ್ರದ ಆದಿತ್ಯ ಬಾಬು ಸೇರಿದಂತೆ ಹಲವರಿಗೆ ಅವರು ಧ್ವನಿ ನೀಡಿದ್ದಾರೆ.

ದಿಲೀಪ್ ರಾಜ್ ಅವರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲಿಕೆ ಕನ್ನಡ ಕಲಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-13 13:02:10
No Reviews