ದರ್ಶನ್ ಭೇಟಿಗಾಗಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್

ಬೆಂಗಳೂರು, ಮೇ 19: ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಹಾಗೂ ಪತ್ನಿ ವಿಜಯಲಕ್ಷ್ಮಿ ದಂಪತಿಗೆ ಇಂದು 23ನೇ ವಿವಾಹ ವಾರ್ಷಿಕೋತ್ಸವ. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ತಮ್ಮ ಪುತ್ರ ವಿನೀಶ್ ಜೊತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ದರ್ಶನ್ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಿದ್ದಾರೆ.

ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಆಗಮಿಸಿದ ವಿಜಯಲಕ್ಷ್ಮಿ, ಜೈಲು ಅಧಿಕಾರಿಗಳ ಅನುಮತಿಯೊಂದಿಗೆ ಪತಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿವಾಹ ವಾರ್ಷಿಕೋತ್ಸವದ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದ ವಿಜಯಲಕ್ಷ್ಮಿ, ಕಠಿಣ ದಿನಗಳಲ್ಲಿ ಪತಿಗೆ ಧೈರ್ಯ ತುಂಬಲು ಈ ಭೇಟಿ ಮಾಡಿರುವುದಾಗಿ ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ ಅವರು ಡಿಜಿಪಿ ಅಲೋಕ್ ಕುಮಾರ್ ಅವರನ್ನು ಭೇಟಿಯಾಗಿ ವಿಶೇಷ ದಿನದಂದು ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಜೈಲು ನಿಯಮಗಳ ಪ್ರಕಾರ ಪರಿಶೀಲನೆ ನಡೆಸಿ ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದರ್ಶನ್ ಅವರ ಜಾಮೀನು ಅರ್ಜಿ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ತಿರಸ್ಕೃತವಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ಬಾಕಿಯಲ್ಲಿವೆ.

ಈ ನಡುವೆ ದರ್ಶನ್ ಬಗ್ಗೆ ಹರಿದಾಡಿದ್ದ ಆತ್ಮಹತ್ಯೆ ಯತ್ನದ ವದಂತಿಗಳನ್ನು ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. “ಇದು ಸಂಪೂರ್ಣ ಸುಳ್ಳು ಸುದ್ದಿ. ದರ್ಶನ್ ಆರೋಗ್ಯವಾಗಿದ್ದಾರೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ,” ಎಂದು ಅವರು ತಿಳಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-19 18:48:59
No Reviews