ಧನುಷ್ ಜೊತೆಗಿನ ಸಂಬಂಧದ ಗುಸುಗುಸು ಬಗ್ಗೆ ಮಾತನಾಡಿದ ಮೃಣಾಲ್ ಠಾಕೂರ್!

ನಟಿ ಮೃಣಾಲ್ ಠಾಕೂರ್ ಮತ್ತು ನಟ ಧನುಷ್ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಗಾಸಿಪ್ ಸಿನಿ ವಲಯದಲ್ಲಿ ಜೋರಾಗಿ ಹರಿದಾಡುತ್ತಿದೆ. ಈ ಕುರಿತು ಅವರಿಬ್ಬರೂ ಇದುವರೆಗೂ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಅವರ ಆತ್ಮೀಯತೆ ಬಗ್ಗೆ ಹಲವು ಅಂತೆ–ಕಂತೆಗಳು ಕೇಳಿಬರುತ್ತಿವೆ.

ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಮೃಣಾಲ್ ಠಾಕೂರ್ ಇತ್ತೀಚೆಗೆ ಪ್ರೀತಿಯ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹೊಸ ಹಾಡಿನ ಪ್ರಚಾರದ ವೇಳೆ ಮಾತನಾಡಿದ ಅವರು, ಪ್ರೀತಿಯನ್ನು ಅತ್ಯಂತ ಸುಂದರ ಭಾವನೆ ಎಂದು ವರ್ಣಿಸಿದ್ದಾರೆ.

ಮೃಣಾಲ್ ಠಾಕೂರ್ ಮತ್ತು ದುಲ್ಕರ್ ಸಲ್ಮಾನ್ ‘ಸೀತಾ ರಾಮಂ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಇದೀಗ ಇಬ್ಬರೂ ‘ಬೀಗಿ ಬೀಗಿ..’ ಎಂಬ ಹೊಸ ಲವ್ ಸಾಂಗ್‌ನಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ನೀಡಿರುವ ಈ ಹಾಡಿನ ಬಗ್ಗೆ ಮಾತನಾಡುವ ಸಂದರ್ಭದಲ್ಲೇ ಮೃಣಾಲ್ ಪ್ರೀತಿಯ ಮಹತ್ವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

“ಪ್ರೀತಿ ಒಂದು ಅದ್ಭುತ ಭಾವನೆ. ಭೂಮಿಯ ಮೇಲಿರುವ ಪ್ರತಿಯೊಬ್ಬರಿಗೂ ಪ್ರೀತಿ ಆಗಬೇಕು. ಅದು ವ್ಯಕ್ತಿಯನ್ನು ಇನ್ನಷ್ಟು ಉತ್ತಮವಾಗಿಸುತ್ತದೆ. ನಮ್ಮೊಳಗಿನ ಮಗುವಿನಂತಿರುವ ಗುಣವನ್ನು ಪೋಷಿಸುತ್ತದೆ. ಜಗತ್ತಿನ ಅತ್ಯಂತ ಸುಂದರ ಸಂಗತಿಗಳಲ್ಲಿ ಪ್ರೀತಿಯೂ ಒಂದಾಗಿದೆ. ಎಲ್ಲರಿಗೂ ಜೀವನದಲ್ಲಿ ಪ್ರೀತಿ ಸಿಗಲಿ” ಎಂದು ಮೃಣಾಲ್ ಹೇಳಿದ್ದಾರೆ.

ಇತ್ತ, ಧನುಷ್ ಜೊತೆಗಿನ ಡೇಟಿಂಗ್ ಗಾಸಿಪ್ ಬಗ್ಗೆ ಮೃಣಾಲ್ ಯಾವಾಗ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈಗಾಗಲೇ ಅವರಿಬ್ಬರ ಮದುವೆ ಬಗ್ಗೆ ಕೂಡ ಸುದ್ದಿಗಳು ಹರಿದಾಡಿವೆ.

2025ರ ಆಗಸ್ಟ್‌ನಲ್ಲಿ ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಮೃಣಾಲ್ ಠಾಕೂರ್ ಮತ್ತು ಧನುಷ್ ಒಟ್ಟಿಗೆ ಕಾಣಿಸಿಕೊಂಡ ನಂತರ ಈ ಗುಸುಗುಸುಗಳಿಗೆ ಇನ್ನಷ್ಟು ಬಲ ಸಿಕ್ಕಿತು. ಪರಸ್ಪರರ ಸಿನಿಮಾಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿರುವುದೂ ಈ ಅನುಮಾನಗಳನ್ನು ಹೆಚ್ಚಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-03 17:56:18
No Reviews