ಏನಿದು ಕಾಕ್ರೋಚ್ ಜನತಾ ಪಾರ್ಟಿ? ರಾಜಕೀಯದಲ್ಲಿ ಹೊಸ ಸಂಚಲನ!

ನವದೆಹಲಿ, ಮೇ 21: ರಾಜಕೀಯದಲ್ಲಿ ಪಕ್ಷಾಂತರ, ಅಧಿಕಾರ ರಾಜಕಾರಣ ಮತ್ತು ಸಿದ್ಧಾಂತಗಳ ಬದಲಾವಣೆ ಹೊಸದೇನಲ್ಲ. ಆದರೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನಿರುದ್ಯೋಗಿ ಯುವಕರ ಬಗ್ಗೆ ಬಳಸಿದ “ಜಿರಳೆಗಳಂತೆ” ಎಂಬ ಹೇಳಿಕೆ ದೇಶಾದ್ಯಂತ ಹೊಸ ವಿವಾದಕ್ಕೆ ಕಾರಣವಾಗಿದೆ. ಪ್ರಮುಖ ಪ್ರಕರಣದ ವಿಚಾರಣೆಯ ವೇಳೆ ಮಾತನಾಡಿದ ಅವರು, ಕೆಲ ನಿರುದ್ಯೋಗಿ ಯುವಕರು ಆರ್‌ಟಿಐ ಕಾರ್ಯಕರ್ತರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರ ರೂಪದಲ್ಲಿ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದರು. ಇದೇ ಹೇಳಿಕೆಯಿಂದಲೇ “ಕಾಕ್ರೋಚ್ ಜನತಾ ಪಾರ್ಟಿ” ಎಂಬ ಪದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಬಂದಿತು.

ಈ ಹೇಳಿಕೆಗೆ ರಾಜಕೀಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿರುದ್ಯೋಗಿ ಯುವಕರನ್ನು ಹೀಗೆ ಗುರುತಿಸುವುದು ಸರಿಯಲ್ಲ ಎಂದು ಹಲವು ನಾಯಕರು ಟೀಕಿಸಿದ್ದಾರೆ. ನಂತರ ಸ್ಪಷ್ಟನೆ ನೀಡಿದ ಮುಖ್ಯ ನ್ಯಾಯಮೂರ್ತಿಗಳು, ಭಾರತೀಯ ಯುವಕರ ಬಗ್ಗೆ ನನಗೆ ಅಪಾರ ಗೌರವವಿದೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಉದ್ಯೋಗ ಕೊರತೆ, ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡ, ಆರ್ಥಿಕ ಅನಿಶ್ಚಿತತೆ ಮತ್ತು ಭ್ರಷ್ಟಾಚಾರದ ಕುರಿತ ಯುವಕರ ಅಸಮಾಧಾನ ಆನ್‌ಲೈನ್ ವೇದಿಕೆಗಳಲ್ಲಿ ಹೆಚ್ಚಾಗುತ್ತಿದೆ. ಇದೇ ಹಿನ್ನೆಲೆ ಈ “ಕಾಕ್ರೋಚ್ ಜನತಾ ಪಾರ್ಟಿ” ಎಂಬ ಪದ ಒಂದು ಡಿಜಿಟಲ್ ಚರ್ಚೆಯ ರೂಪ ಪಡೆದುಕೊಂಡಿದೆ.

ಈ ಪದಕ್ಕೆ ನೇರವಾಗಿ ಯಾವುದೇ ಅಧಿಕೃತ ರಾಜಕೀಯ ಪಕ್ಷ ಇಲ್ಲದಿದ್ದರೂ, ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಟೀಕೆಗೆ ಇದನ್ನು ಬಳಸಿಕೊಳ್ಳುತ್ತಿವೆ. ವಿರೋಧ ಪಕ್ಷಗಳ ಆರೋಪ ಪ್ರಕಾರ, ಆಡಳಿತ ಪಕ್ಷವು ಪಕ್ಷಾಂತರ ರಾಜಕಾರಣದ ಮೂಲಕ ‘ಕಾಕ್ರೋಚ್ ಪಾರ್ಟಿ’ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಆಡಳಿತ ಪಕ್ಷವು ಸಿದ್ಧಾಂತವಿಲ್ಲದ ವಿರೋಧ ಪಕ್ಷಗಳ ಮೈತ್ರಿಯನ್ನೇ ಈ ಪದಕ್ಕೆ ಹೋಲಿಸುತ್ತಿದೆ.

ಈ ಚರ್ಚೆಯನ್ನು ಮತ್ತಷ್ಟು ಜನಪ್ರಿಯಗೊಳಿಸಿದವರು ಡಿಜಿಟಲ್ ಕ್ರಿಯೇಟರ್ ಅಭಿಜೀತ್ ದೀಪ್ಕೆ. ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ಅಧ್ಯಯನ ಮಾಡಿರುವ ಅವರು, ಹಿಂದೆ ಆಮ್ ಆದ್ಮಿ ಪಕ್ಷದ ಸಾಮಾಜಿಕ ಮಾಧ್ಯಮ ತಂಡದಲ್ಲೂ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಅವರು ರಾಜಕೀಯ ವ್ಯಂಗ್ಯ ವಿಡಿಯೋಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಇತ್ತೀಚೆಗೆ ಆರಂಭವಾದ ಈ ಆನ್‌ಲೈನ್ ಚಳವಳಿ ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದ ಗಮನ ಸೆಳೆದಿದ್ದು, ಜೆನ್ ಝೀ ಯುವಕರ ಅಸಮಾಧಾನ ಮತ್ತು ನಿರುದ್ಯೋಗದ ಕುರಿತು ನಡೆಯುತ್ತಿರುವ ಡಿಜಿಟಲ್ ಪ್ರತಿಭಟನೆಯ ರೂಪದಲ್ಲಿ ಬೆಳೆಯುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಈ ಚರ್ಚೆಗೆ ಪ್ರತಿಕ್ರಿಯೆಯಾಗಿ ಕೆಲ ರಾಜಕೀಯ ನಾಯಕರು ಕೂಡ ವ್ಯಂಗ್ಯವಾಗಿ “ನಾವು ಕೂಡ ಕಾಕ್ರೋಚ್ ಜನತಾ ಪಾರ್ಟಿಗೆ ಸೇರಲು ಬಯಸುತ್ತೇವೆ” ಎಂದು ಹೇಳಿಕೆ ನೀಡಿದ್ದು, ವಿಷಯ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-21 11:43:06
No Reviews