ಶಿಕ್ಷಣ ಸಚಿವರ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷದ ಶಕ್ತಿ ಪ್ರದರ್ಶನ; ಶಿಕ್ಷಣ ಸಚಿವರ ರಾಜೀನಾಮೆಗೆ ಅಭಿಜೀತ್ ದಿಪ್ಕೆ ಆಗ್ರಹ

ಸಾಮಾಜಿಕ ಮಾಧ್ಯಮದ ಮೂಲಕ ಕೆಲವೇ ತಿಂಗಳುಗಳ ಹಿಂದೆ ರೂಪುಗೊಂಡ ಕಾಕ್ರೋಚ್ ಜನತಾ ಪಕ್ಷ (CJP) ಶನಿವಾರ ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಭಾರಿ ಶಕ್ತಿ ಪ್ರದರ್ಶನ ನಡೆಸಿತು. ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು, ಯುವ ವೃತ್ತಿಪರರು ಹಾಗೂ ಪೋಷಕರು ಭಾಗವಹಿಸಿ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದರು.

ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದ ಅಭಿಜೀತ್ ದಿಪ್ಕೆ, ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರವಾಗಿ ಬೆಳಕಿಗೆ ಬರುತ್ತಿರುವ ಅಕ್ರಮಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯುಂಟು ಮಾಡುತ್ತಿವೆ ಎಂದು ಆರೋಪಿಸಿದರು. ಇದೇ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ದೆಹಲಿ ತಲುಪಿದ ತಕ್ಷಣವೇ ಜಂತರ್ ಮಂತರ್‌ಗೆ ಆಗಮಿಸಿದ ದಿಪ್ಕೆ ಅವರಿಗೆ ನೂರಾರು ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಭರ್ಜರಿ ಸ್ವಾಗತ ಕೋರಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಅನೇಕರು ಜಿರಳೆ ಮುಖವಾಡ ಧರಿಸಿ, ಕೈಯಲ್ಲಿ ಹೂವು ಹಾಗೂ ರಾಷ್ಟ್ರಧ್ವಜ ಹಿಡಿದು ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ನೀಟ್, ಸಿಬಿಎಸ್‌ಇ, ಸಿಯುಇಟಿ ಮತ್ತು ಎಸ್‌ಎಸ್‌ಸಿ ಸೇರಿದಂತೆ ವಿವಿಧ ಪರೀಕ್ಷೆಗಳ ಪಾರದರ್ಶಕತೆ ಕುರಿತ ಪ್ರಶ್ನೆಗಳು ಪ್ರತಿಭಟನೆಯ ಪ್ರಮುಖ ವಿಷಯಗಳಾಗಿದ್ದವು.

ಶಾಂತಿಯುತ ಹೋರಾಟಕ್ಕೆ ಕರೆ

ಪ್ರತಿಭಟನೆಗೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಂದೇಶ ಹಂಚಿಕೊಂಡಿದ್ದ ಅಭಿಜೀತ್ ದಿಪ್ಕೆ, ಇದು ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ನಡೆಸುತ್ತಿರುವ ಶಾಂತಿಯುತ ಮತ್ತು ಸಂವಿಧಾನಬದ್ಧ ಚಳವಳಿಯಾಗಿದೆ ಎಂದು ಸ್ಪಷ್ಟಪಡಿಸಿದರು. ಪ್ರತಿಭಟನಾಕಾರರು ಶಿಸ್ತನ್ನು ಕಾಪಾಡಿಕೊಳ್ಳಬೇಕು ಹಾಗೂ ಯಾವುದೇ ರೀತಿಯ ಸಂಘರ್ಷಕ್ಕೆ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದರು.

“ಪುಸ್ತಕ ಮತ್ತು ತಿರಂಗವನ್ನು ಜೊತೆಯಲ್ಲಿ ತೆಗೆದುಕೊಂಡು ಬನ್ನಿ. ಪೊಲೀಸರಿಗೆ ಹೂವುಗಳನ್ನು ನೀಡಿ ಗೌರವಿಸಿ. ನಮ್ಮ ಹೋರಾಟ ಪ್ರೀತಿ, ಶಾಂತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದ ಮೇಲೆ ಸಾಗಬೇಕು” ಎಂದು ಅವರು ಕರೆ ನೀಡಿದರು.

ಸೋನಂ ವಾಂಗ್‌ಚುಕ್ ಬೆಂಬಲ

ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್‌ಚುಕ್ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಪ್ರತಿಭಟನಾಕಾರರು ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು. ಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯುವಂತೆ ಸಲಹೆ ನೀಡಿದ ಅವರು, ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಹೇಳಿದರು.

ಇದೇ ವೇಳೆ, ಅಭಿಜೀತ್ ದಿಪ್ಕೆ ಅವರನ್ನು ಬಂಧಿಸಿದರೆ ಆರು ವಾರಗಳ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ವಾಂಗ್‌ಚುಕ್ ಘೋಷಿಸಿದರು.

ರಾಜಧಾನಿಯಲ್ಲಿ ಕಟ್ಟೆಚ್ಚರ

ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳು ರಾಜಧಾನಿಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಿದ್ದವು. ಜಂತರ್ ಮಂತರ್, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಮುಖ ರೈಲು ನಿಲ್ದಾಣಗಳು, ಅಂತರರಾಜ್ಯ ಬಸ್ ನಿಲ್ದಾಣಗಳು ಹಾಗೂ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಗತ್ಯ ಅನುಮತಿ ನೀಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಹುಹಂತದ ಬ್ಯಾರಿಕೇಡಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸದ ಭದ್ರತೆಯನ್ನೂ ಹೆಚ್ಚಿಸಲಾಗಿತ್ತು.

ಪೊಲೀಸರ ಮಾಹಿತಿ ಪ್ರಕಾರ, ಪ್ರತಿಭಟನೆ ಶಾಂತಿಯುತವಾಗಿ ನಡೆದಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಸಾರ್ವಜನಿಕ ಸಂಚಾರ ಮತ್ತು ಮೆಟ್ರೋ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿವೆ.

ಯುವಕರ ಧ್ವನಿಗೆ ವೇದಿಕೆಯಾದ ಜಂತರ್ ಮಂತರ್

ಕಾಕ್ರೋಚ್ ಜನತಾ ಪಕ್ಷದ ಈ ಮೊದಲ ದೊಡ್ಡ ಸಾರ್ವಜನಿಕ ಪ್ರತಿಭಟನೆ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮತ್ತು ಪರೀಕ್ಷಾ ಪಾರದರ್ಶಕತೆ ಕುರಿತ ಚರ್ಚೆಯನ್ನು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಮುನ್ನೆಲೆಗೆ ತಂದಿದೆ. ಯುವ ಸಮೂಹದ ದೊಡ್ಡ ಪ್ರಮಾಣದ ಭಾಗವಹಿಸುವಿಕೆ ಈ ಚಳವಳಿಗೆ ಹೊಸ ಗಮನ ಸೆಳೆದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-06-06 15:39:35
No Reviews