ಬೇಲಿ ಹೊಲ ಮೇಯೋದು ಮಿತಿ ಮೀರಿತು 88 ಕೇಸ್‌ಗಳಿಗೆ ಸಿಎಂ ಆಕ್ರೋಶ

ಪೋಲೀಸ್ ಅಧಿಕಾರಿಗಳ ತಿಳಿವಳಿಕೆ ಇಲ್ಲದೆ ಯಾವುದೇ ಅಪರಾಧ ನಡೆಯಲು ಸಾಧ್ಯವಿಲ್ಲ. ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕಾರ್ಯನಿರ್ವಹಿಸಿ ದುರ್ಬಲರಿಗೆ ರಕ್ಷಣೆ ನೀಡಬೇಕು; ಬಲಾಢ್ಯರ ಕೈಗೊಂಬೆಗಳಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಾಗಿ ಸೂಚಿಸಿದರು.

ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಕರ್ನಾಟಕವನ್ನು ಮಾದಕವಸ್ತು ಮುಕ್ತ ರಾಜ್ಯವನ್ನಾಗಿ ಮಾಡಬಹುದು. ಕಳ್ಳತನ, ಸುಲಿಗೆ, ದರೋಡೆ, ಕೊಲೆ ಪ್ರಕರಣಗಳು ಕಡಿಮೆಯಾಗಿದ್ದರೂ ಸೈಬರ್ ಅಪರಾಧ ಮತ್ತು ಡ್ರಗ್ಸ್ ದಂಧೆ ಆತಂಕಕಾರಿ ಮಟ್ಟದಲ್ಲಿದೆ. ಯುವಜನರನ್ನು ರಕ್ಷಿಸುವ ಹೊಣೆ ಪೊಲೀಸರ ಮೇಲಿದೆ ಎಂದು ಹೇಳಿದರು.

ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವಿದೇಶಿಯರನ್ನು ಯಾವುದೇ ಮುಲಾಜಿಲ್ಲದೆ ಅವರ ದೇಶಕ್ಕೆ ಕಳುಹಿಸಬೇಕು. ಸರಬರಾಜುದಾರರನ್ನು ಗುರಿಯಾಗಿಸಿಕೊಂಡು ಜಾಲವನ್ನು ಭೇದಿಸಲು ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಡ್ರಗ್ಸ್ ಪತ್ತೆ ಹಚ್ಚುವಲ್ಲಿ ವಿಫಲರಾದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸೈಬರ್ ಅಪರಾಧ ಹಾಗೂ ಮಾದಕವಸ್ತು ನಿಯಂತ್ರಣಕ್ಕೆ ಕಾನೂನು ಇನ್ನಷ್ಟು ಬಿಗಿಗೊಳಿಸುವ ಅಗತ್ಯವಿದ್ದು, ಹೊಸ ತಿದ್ದುಪಡಿಗಳು ಬರಲಿವೆ ಎಂದರು. ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಲಿದೆ ಎಂದು ತಿಳಿಸಿದರು.

ಯಾವುದೇ ಪಕ್ಷದವರಾಗಲಿ, ಕಾನೂನಿಗಿಂತ ಯಾರೂ ಮೇಲಲ್ಲ. ತಪ್ಪು ಮಾಡಿದರೆ ಕ್ರಮ ಅನಿವಾರ್ಯ ಎಂದು ಮುಖ್ಯಮಂತ್ರಿ ಸ್ಪಷ್ಟ ಸಂದೇಶ ನೀಡಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-17 18:51:12
No Reviews