ಉದ್ಯಮಿ ಸಿ.ಜೆ. ರಾಯ್ ಪ್ರಕರಣ: ಎಸ್ಐಟಿ ತನಿಖೆಗೆ ಎದುರಾದ ‘ಮಿಲಿಯನ್ ಡಾಲರ್ ಪ್ರಶ್ನೆ’

ರಾಯ್ ಅವರಿಗೆ ಯಾವುದೇ ಕೌಟುಂಬಿಕ, ಆರ್ಥಿಕ ಅಥವಾ ಉದ್ಯಮ ಸಂಬಂಧ ಸಮಸ್ಯೆಗಳಿರಲಿಲ್ಲ ಎಂಬ ಅಂಶಗಳು ತನಿಖೆಯಲ್ಲಿ ಇದುವರೆಗೂ ಬೆಳಕಿಗೆ ಬಂದಿವೆ. ಆದರೂ ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎಂಬ ವಿಚಾರ ಇದೀಗ ಎಸ್ಐಟಿ ಅಧಿಕಾರಿಗಳ ಮುಂದೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಸಿ.ಜೆ. ರಾಯ್ ಅವರು ಯಾವುದೇ ಬ್ಯಾಂಕ್‌ಗಳಿಂದ ಸಾಲ ಪಡೆದಿರಲಿಲ್ಲ. ಉದ್ಯಮ ಸಂಬಂಧ ಯಾವುದೇ ಬಾಕಿ ಅಥವಾ ಹಣಕಾಸಿನ ಸಂಕಷ್ಟವೂ ಇರಲಿಲ್ಲ. ಕುಟುಂಬ ಜೀವನದಲ್ಲಿಯೂ ಸಮಸ್ಯೆಗಳಿಲ್ಲದೆ, ಸೋದರ ಸಂಬಂಧಿಗಳ ಜೊತೆ ಸಹ ಉತ್ತಮ ಬಾಂಧವ್ಯ ಹೊಂದಿದ್ದರು ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಲು ಕಾರಣವೇನು ಎಂಬುದು ತನಿಖಾಧಿಕಾರಿಗಳಿಗೆ ಇನ್ನೂ ಸ್ಪಷ್ಟವಾಗಿಲ್ಲ.

ಇತ್ತೀಚೆಗೆ ಸಿ.ಜೆ. ರಾಯ್ ಹಲವು ಹೊಸ ಉದ್ಯಮ ಪ್ರಾಜೆಕ್ಟ್‌ಗಳನ್ನು ಘೋಷಿಸಿದ್ದರು. ಆತ್ಮಹತ್ಯೆ ಪ್ರಕರಣದ ನಂತರ ದುಬೈ ಹಾಗೂ ಕೇರಳದಲ್ಲಿನ ಹೂಡಿಕೆಯಿಂದ ನಷ್ಟವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದರೂ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ. ಈ ಹೂಡಿಕೆಗಳು ಹಾಗೂ ಸಂಭವನೀಯ ನಷ್ಟದ ಕುರಿತಾಗಿಯೂ ಎಸ್ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ, ಸಿ.ಜೆ. ರಾಯ್ ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾನಸಿಕ ಒತ್ತಡ ಹೊರತುಪಡಿಸಿ ಅವರಿಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ತಿಳಿದು ಬಂದಿದೆ. ಈ ಹಿಂದೆ ಚಿಕಿತ್ಸೆ ನೀಡಿದ್ದ ವೈದ್ಯರಿಂದ ರಾಯ್ ಅವರ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಎಸ್ಐಟಿ ಪಡೆದುಕೊಂಡಿದೆ.

ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ಪರಿಶೀಲಿಸಲಾಗುತ್ತಿದ್ದರೂ, ಮಾನಸಿಕ ಒತ್ತಡದ ಹಿಂದಿನ ನಿಜವಾದ ಕಾರಣ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯೇ ಸಾವಿಗೆ ಪ್ರಮುಖ ಕಾರಣವೋ ಅಥವಾ ಇನ್ನಾವುದೇ ಅಡಗಿರುವ ಸಮಸ್ಯೆಗಳಿದ್ದವೋ ಎಂಬುದರ ಕುರಿತು ಎಸ್ಐಟಿ ಅಧಿಕಾರಿಗಳು ಸತ್ಯಾಂಶಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಪ್ರಕರಣದಲ್ಲಿ ಸ್ಪಷ್ಟ ಉತ್ತರ ಸಿಗುವವರೆಗೆ ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-07 10:48:12
No Reviews