ಬಿಡದಿ ಟೌನ್‌ಶಿಪ್: 498 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ

ಬಿಡದಿ-ಟೌನ್‌ಶಿಪ್ : ರೈತರ ಪರ–ವಿರೋಧದ ನಡುವೆಯೂ ರಾಜ್ಯ ಸರ್ಕಾರವು ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್‌ಶಿಪ್) ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. 9 ಕಂದಾಯ ಗ್ರಾಮಗಳ ಪೈಕಿ ಮೊದಲ ಹಂತವಾಗಿ 3 ಗ್ರಾಮಗಳ 498 ಎಕರೆ 54 ಗುಂಟೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಕೆಂಪಯ್ಯನಪಾಳ್ಯ (367.15 ಎಕರೆ), ಮಂಡಲಹಳ್ಳಿ (70.37 ಎಕರೆ) ಹಾಗೂ ವಡೇರಹಳ್ಳಿ (61.02 ಎಕರೆ) ಗ್ರಾಮಗಳ ಭೂಮಿ ಮೊದಲ ಹಂತದಲ್ಲಿ ಸ್ವಾಧೀನಕ್ಕೆ ಒಳಪಡಲಿದೆ. ಸುಮಾರು ₹20,000 ಕೋಟಿ ವೆಚ್ಚದ ಈ ಮೆಗಾ ಯೋಜನೆಗೆ ಒಟ್ಟು 7,881 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 6,731 ಎಕರೆ ಖಾಸಗಿ ಭೂಮಿಯಾಗಿದೆ.

ಮಾರ್ಚ್ 12, 2025ರಂದು ಪ್ರಾಥಮಿಕ ಅಧಿಸೂಚನೆ ಹೊರಬಿದ್ದಿದ್ದ ಈ ಯೋಜನೆಗೆ, ಕಾನೂನು ಪ್ರಕ್ರಿಯೆಗಳ ಬಳಿಕ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಆಕಾರ್ ಬಂದ್ ಹಾಗೂ ಪಹಣಿ ವ್ಯತ್ಯಾಸದ ಸಂದರ್ಭಗಳಲ್ಲಿ ಆಕಾರ್ ಬಂದ್‌ನ್ನೇ ಅಂತಿಮವೆಂದು ಪರಿಗಣಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ವರ್ಕ್–ಲಿವ್–ಪ್ಲೇ ಮಾದರಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಈ ಟೌನ್‌ಶಿಪ್‌ಗೆ ಮೇ 7ರಂದು ಸಚಿವ ಸಂಪುಟ ಅನುಮೋದನೆ ದೊರೆತಿತ್ತು. ಭೂಸ್ವಾಧೀನದ ಪರಿಹಾರ, ಮೌಲ್ಯ ನಿರ್ಧಾರ ಮತ್ತು ಅರ್ಹತೆಗಳ ಕುರಿತು ಕಂದಾಯ ಇಲಾಖೆಯ ಮಾರ್ಗಸೂಚಿಗಳಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ನಡುವೆ ಯೋಜನೆ ವಿರುದ್ಧ 450ಕ್ಕೂ ಹೆಚ್ಚು ದಿನಗಳಿಂದ ರೈತರ ಹೋರಾಟ ಮುಂದುವರಿದಿದ್ದರೆ, ಮತ್ತೊಂದೆಡೆ ಯೋಜನೆ ಪರವಾಗಿರುವ ರೈತರು ಶೀಘ್ರ ಪರಿಹಾರಕ್ಕೆ ಒತ್ತಡ ಹೇರುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಂತ ಹಂತವಾಗಿ ಭೂಸ್ವಾಧೀನ ನಡೆಸುವುದಾಗಿ ಘೋಷಿಸಿದ್ದಂತೆ ಮೊದಲ ಹಂತದ ಅಧಿಸೂಚನೆ ಹೊರಬಂದಿದೆ.

ಇನ್ನೂ 6 ಗ್ರಾಮಗಳ ಸುಮಾರು 7,000 ಎಕರೆ ಭೂಸ್ವಾಧೀನ ಪ್ರಕ್ರಿಯೆ ಮುಂದಿನ ಹಂತದಲ್ಲಿ ಬಾಕಿಯಿದ್ದು, ಜೂನ್ 15ರಿಂದ ಅರ್ಹ ರೈತರಿಗೆ ಪರಿಹಾರ ಮೊತ್ತ ವಿತರಣೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-06-13 12:20:45
No Reviews