ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಮಾರಾಟಕ್ಕೆ ಮಿತಿ: ಹೊಸ ನಿಯಮ

ಹೊಸದಿಲ್ಲಿ: ಕಾಳಸಂತೆ ಮತ್ತು ಅಕ್ರಮ ದಾಸ್ತಾನು ನಿಯಂತ್ರಿಸಲು ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟಕ್ಕೆ ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಹೊಸ ನಿರ್ದೇಶನದ ಪ್ರಕಾರ, ಇನ್ನು ಮುಂದೆ ಪ್ರತಿಯೊಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಪೆಟ್ರೋಲ್ ಬಂಕ್‌ಗಳಲ್ಲಿ ದೊರೆಯಲಿದೆ.

ಕೈಗಾರಿಕಾ ಹಾಗೂ ವಾಣಿಜ್ಯ ಬಳಕೆದಾರರು ಕಡಿಮೆ ದರದ ಲಾಭಕ್ಕಾಗಿ ಚಿಲ್ಲರೆ ಪೆಟ್ರೋಲ್ ಬಂಕ್‌ಗಳತ್ತ ಮುಖ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ನಿಯಂತ್ರಣ ಜಾರಿಗೆ ತರಲಾಗಿದೆ. ಡೀಸೆಲ್ ಅನ್ನು ಕೇವಲ ವಾಹನದ ಇಂಧನ ಟ್ಯಾಂಕ್‌ಗೆ ಮಾತ್ರ ತುಂಬಿಸಬೇಕು; ಬ್ಯಾರಲ್ ಅಥವಾ ಕ್ಯಾನ್‌ಗಳಲ್ಲಿ ತುಂಬಿಸಿಕೊಳ್ಳಲು ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳ ಸಗಟು ಖರೀದಿ–ಮಾರಾಟದ ಮೇಲೆ ನಿಯಂತ್ರಣ ಬಿಗಿಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ದಾಸ್ತಾನು ಮತ್ತು ಕಾಳಸಂತೆಯ ಮಾರಾಟದಿಂದ ಸಾಮಾನ್ಯ ಗ್ರಾಹಕರಿಗೆ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ.

ಹೊಸ ನಿಯಮದಂತೆ, ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ವಿಧಿಸಿರುವ ಡೀಸೆಲ್ ಮಿತಿ ಕುರಿತು ಸ್ಪಷ್ಟ ಸೂಚನಾ ಫಲಕಗಳನ್ನು ಹಾಕುವುದು ಕಡ್ಡಾಯವಾಗಿದೆ. ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್ ಮೀರದಂತೆ ಡೀಸೆಲ್ ಮಾರಾಟ ಮಾಡಬೇಕು ಹಾಗೂ ಖರೀದಿಸಿದ ಇಂಧನವನ್ನು ಮರುಮಾರಾಟ ಮಾಡಲು ಅವಕಾಶವಿಲ್ಲ.

ಸಂಸ್ಥೆಗಳು ಮತ್ತು ಕೈಗಾರಿಕಾ ಬಳಕೆದಾರರು ಇನ್ನು ಮುಂದೆ ಬಲ್ಕ್ (ಸಗಟು) ಸರಬರಾಜು ಚಾನೆಲ್ ಮೂಲಕವೇ ಇಂಧನ ಪಡೆಯಬೇಕಾಗುತ್ತದೆ. ಚಿಲ್ಲರೆ ಮಾರಾಟ ಮಳಿಗೆಗಳಿಂದ ದೊಡ್ಡ ಪ್ರಮಾಣದಲ್ಲಿ ಇಂಧನ ಖರೀದಿಸುವುದನ್ನು ನಿರ್ಬಂಧಿಸಲಾಗಿದೆ.

“ಮೋಟರ್ ಸ್ಪಿರಿಟ್ ಮತ್ತು ಹೈಸ್ಪೀಡ್ ಡೀಸೆಲ್ ಆದೇಶ 2026” ಅಡಿಯಲ್ಲಿ ಈ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಇಂಧನ ಸಂಗ್ರಹ, ಕಲಬೆರಕೆ ಮತ್ತು ಅಕ್ರಮ ಮಾರಾಟ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-06-13 12:50:12
No Reviews