ಬೆಂಗಳೂರು | ತಗ್ಗದ ಸಂಚಾರ ದಟ್ಟಣೆ: ರೆಸಿಡೆನ್ಸಿ–ಜೆ.ಸಿ. ರಸ್ತೆಯಲ್ಲಿ ಸವಾರರ ಸಂಕಷ್ಟ

ರಸ್ತೆಯ ಎರಡೂ ಬದಿಗಳಲ್ಲಿ ಅಕ್ರಮ ಪಾರ್ಕಿಂಗ್ ಸಾಮಾನ್ಯವಾಗಿದೆ. ಇದರ ಪರಿಣಾಮ ದಿನದ ಬಹುತೇಕ ಅವಧಿಯಲ್ಲಿ ದಟ್ಟಣೆ ಉಂಟಾಗಿ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ರೆಸಿಡೆನ್ಸಿ ರಸ್ತೆಯಲ್ಲಿ ಬೆಳಿಗ್ಗೆ 7.30ರಿಂದ 11 ಗಂಟೆವರೆಗೆ, ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಹಾಗೂ ಸಂಜೆ 6 ಗಂಟೆಯ ನಂತರ ದಟ್ಟಣೆ ಗರಿಷ್ಠ ಮಟ್ಟ ತಲುಪುತ್ತದೆ. ಈ ವೇಳೆ ವಾಹನಗಳು ಆಮೆ ವೇಗದಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆಯ ಅಕ್ಕಪಕ್ಕದಲ್ಲಿರುವ ಶಾಲಾ–ಕಾಲೇಜುಗಳ ವಾಹನಗಳೇ ದಟ್ಟಣೆಗೆ ಪ್ರಮುಖ ಕಾರಣವಾಗಿದೆ.

ಮಿಷನ್ ರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ (ಡಬಲ್ ರೋಡ್), ರಾಜಾರಾಮ್ ಮೋಹನ್ ರಾಯ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳ ವಾಹನಗಳು ರೆಸಿಡೆನ್ಸಿ ರಸ್ತೆಯನ್ನು ಸೇರಿಕೊಳ್ಳುತ್ತವೆ. ಹೀಗಾಗಿ ಪ್ರತಿದಿನ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಜನಾರ್ದನ್ ಟವರ್, ಚಾನ್ಸೆರಿ ಪೆವಿಲಿಯನ್, ರಿಟ್ಜ್ ಕಾರ್ಲ್ಟನ್ ಹೋಟೆಲ್, ಪ್ರೆಸ್ಟೀಜ್ ಡಾಟ್ ಕಾಮ್ ಕಟ್ಟಡ ಸೇರಿ ಪ್ರಮುಖ ವಾಣಿಜ್ಯ ಕಟ್ಟಡಗಳು ಇಲ್ಲಿ ಇರುವುದರಿಂದ, ಶಾಲಾ–ಕಾಲೇಜುಗಳಿಗೆ ರಜೆ ಇರುವ ದಿನಗಳಲ್ಲಿಯೂ ಬೆಳಿಗ್ಗೆ ಹಾಗೂ ಸಂಜೆ ದಟ್ಟಣೆ ತಪ್ಪುವುದಿಲ್ಲ.

‘ಪ್ರಜಾವಾಣಿ’ ಪ್ರತಿನಿಧಿ ಜೆ.ಸಿ. ರಸ್ತೆ, ಲಾಲ್ಬಾಗ್ ಮುಖ್ಯರಸ್ತೆ, ಮಿಷನ್ ರಸ್ತೆ, ಡಬಲ್ ರೋಡ್ ಹಾಗೂ ರೆಸಿಡೆನ್ಸಿ ರಸ್ತೆಗಳಲ್ಲಿ ಸಂಚರಿಸಿದಾಗ ದಟ್ಟಣೆಯ ದರ್ಶನದ ಜೊತೆಗೆ ನಿಧಾನಗತಿಯ ಸಂಚಾರ ಅನುಭವಕ್ಕೆ ಬಂತು. ಆಶೀರ್ವಾದಂ ಜಂಕ್ಷನ್‌ನಿಂದ ಬ್ರಿಗೇಡ್ ಜಂಕ್ಷನ್‌ವರೆಗೆ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದರೂ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಸಮಸ್ಯೆಗಿಲ್ಲ ಶಾಶ್ವತ ಪರಿಹಾರ:
ರೆಸಿಡೆನ್ಸಿ ರಸ್ತೆಯ ಸುತ್ತಮುತ್ತ ಸುಮಾರು 50ಕ್ಕೂ ಹೆಚ್ಚು ಶಾಲಾ–ಕಾಲೇಜುಗಳಿವೆ. ಶಾಲೆಗಳು ಆರಂಭವಾಗುವ ಹಾಗೂ ಮುಗಿಯುವ ಸಮಯದಲ್ಲಿ ಕಿಲೋಮೀಟರ್‌ಗಳಷ್ಟು ದೂರ ವಾಹನಗಳು ನಿಂತಲ್ಲೇ ನಿಂತಿರುತ್ತವೆ. ಈ ಅವಧಿಯಲ್ಲಿ ಪ್ರಯಾಣ ಅತೀ ಕಷ್ಟಕರವಾಗುತ್ತದೆ. ದಟ್ಟಣೆ ತಪ್ಪಿಸಲು ಕೆಲ ದ್ವಿಚಕ್ರ ವಾಹನ ಸವಾರರು ಪಾದಚಾರಿ ಮಾರ್ಗಗಳ ಮೇಲೆಯೂ ವಾಹನ ಚಲಾಯಿಸುವುದು ಅಪಾಯಕ್ಕೆ ಕಾರಣವಾಗುತ್ತಿದೆ.

“ರೆಸಿಡೆನ್ಸಿ ರಸ್ತೆಯ ದಟ್ಟಣೆ ಹಲವು ವರ್ಷಗಳಿಂದ ಮುಂದುವರಿದಿದೆ. ಶಾಲಾ ಸಮಯದಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತದೆ. ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇನ್ನು ಸಂಚಾರ ಪೊಲೀಸರು, “ಹಳೆ ವಿಮಾನ ನಿಲ್ದಾಣ ರಸ್ತೆ, ವೈಟ್‌ಫೀಲ್ಡ್ ಸೇರಿದಂತೆ ವಿವಿಧ ಭಾಗಗಳಿಗೆ ತೆರಳುವವರು ಈ ರಸ್ತೆಯನ್ನು ಅವಲಂಬಿಸುತ್ತಾರೆ. ಖಾಸಗಿ ವಾಹನ ಬಳಕೆ ಹೆಚ್ಚಿದ್ದು, ಸಾರ್ವಜನಿಕ ಸಾರಿಗೆ ಬಳಕೆ ಕಡಿಮೆಯಾಗಿದೆ. ವಾಹನ ಸವಾರರು ಸಹಕರಿಸಿದರೆ ದಟ್ಟಣೆ ತಗ್ಗಿಸಬಹುದು” ಎನ್ನುತ್ತಾರೆ.

ಜೆ.ಸಿ. ರಸ್ತೆಯಲ್ಲೂ ಸಮಸ್ಯೆ ಮುಂದುವರಿಕೆ:
ನಗರದ ಹೃದಯಭಾಗದಲ್ಲಿರುವ ಜೆ.ಸಿ. ರಸ್ತೆಗೆ ವೈಟ್‌ಟಾಪಿಂಗ್ ಮಾಡಲಾಗಿದ್ದು ರಸ್ತೆ ಅಗಲ ಹಾಗೂ ರೂಪ ಬದಲಾಗಿದೆ. ಆದರೆ, ರಸ್ತೆಯ ಇಕ್ಕೆಲಗಳಲ್ಲಿ ವಾಹನ ಪಾರ್ಕಿಂಗ್ ಹೆಚ್ಚಿರುವುದರಿಂದ ದಟ್ಟಣೆ ತಗ್ಗಿಲ್ಲ. ಮಿನರ್ವ ವೃತ್ತದಿಂದ ಭಾರತ್ ಜಂಕ್ಷನ್‌ವರೆಗೆ ವಾಹನ ಬಿಡಿ ಭಾಗಗಳ ಮಳಿಗೆಗಳಿರುವುದರಿಂದ ರಸ್ತೆ ಮೇಲೆಯೇ ವಾಹನ ನಿಲ್ಲಿಸಲಾಗುತ್ತಿದೆ. ಕೆಲ ಮಳಿಗೆ ಪ್ರತಿನಿಧಿಗಳು ನಡು ರಸ್ತೆಯಲ್ಲಿ ನಿಂತು ವ್ಯಾಪಾರ ನಡೆಸುವುದು ಅಪಘಾತದ ಆತಂಕ ಹೆಚ್ಚಿಸಿದೆ.

ಲಾಲ್ಬಾಗ್ ಫೋರ್ಟ್ ರಸ್ತೆ, ಡಯಾಗನಲ್ ರಸ್ತೆ, ಆರ್.ವಿ ರಸ್ತೆ ಸೇರಿದಂತೆ ನಾಲ್ಕು ಪ್ರಮುಖ ರಸ್ತೆಗಳ ವಾಹನಗಳು ಜೆ.ಸಿ. ರಸ್ತೆಯನ್ನು ಸೇರಿಕೊಳ್ಳುವುದರಿಂದ ಇಲ್ಲಿ ಸಂಚಾರದ ಒತ್ತಡ ಮತ್ತಷ್ಟು ಹೆಚ್ಚಾಗಿದೆ.

ಪಾದಚಾರಿ ಮಾರ್ಗವೇ ಇಲ್ಲ:
ಜೆ.ಸಿ. ರಸ್ತೆಯ ಪಾದಚಾರಿ ಮಾರ್ಗಗಳ ಮೇಲೆ ವಾಹನ ಪಾರ್ಕಿಂಗ್ ಹಾಗೂ ವಸ್ತುಗಳ ಅಕ್ರಮ ಸಂಗ್ರಹಣೆ ನಡೆಯುತ್ತಿದೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆದು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಿನೋಬಾ ನಗರದ 1ನೇ ಅಡ್ಡರಸ್ತೆಯಲ್ಲಿ ಒಎಫ್ಸಿ ಕಾಮಗಾರಿಯಿಂದ ರಸ್ತೆ ಹದಗೆಟ್ಟಿದ್ದು ಪ್ರಯಾಣ ಕಷ್ಟಕರವಾಗಿದೆ.

ಪರಿಹಾರ ಏನು?
ಸಂಚಾರ ಪೊಲೀಸರು, “ಶಾಲಾ ವಾಹನಗಳು ಶಾಲಾ ಆವರಣದೊಳಗೆ ಹೋಗಬೇಕು. ಖಾಸಗಿ ವಾಹನ ಬಳಕೆ ಕಡಿಮೆಯಾಗಬೇಕು. ಶಾಲೆಗಳ ಸಮಯ ಹಂತ ಹಂತವಾಗಿ ನಿಗದಿಪಡಿಸಬೇಕು. ರೆಸಿಡೆನ್ಸಿ ರಸ್ತೆ ಹಾಗೂ ಜೆ.ಸಿ. ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಿದರೆ ದಟ್ಟಣೆ ಬಹುತೇಕ ನಿವಾರಣೆಯಾಗಲಿದೆ” ಎಂದು ಸಲಹೆ ನೀಡುತ್ತಾರೆ.

ಅಧಿಕ ದಟ್ಟಣೆ ಇರುವ ಸ್ಥಳಗಳು:

  • ಮಿನರ್ವ ವೃತ್ತ

  • ಭಾರತ್ ಜಂಕ್ಷನ್

  • ಬಿ.ಎನ್. ಗರುಡಾಚಾರ್ ವೃತ್ತ

  • ಸೇಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್

  • ಆಶೀರ್ವಾದಂ ಜಂಕ್ಷನ್

  • ಬ್ರಿಗೇಡ್ ಜಂಕ್ಷನ್

  • ಡಬಲ್ ರಸ್ತೆ ಜಂಕ್ಷನ್

  • ಶಾಂತಿನಗರ ಜಂಕ್ಷನ್

  • ಕೆ.ಎಚ್. ವೃತ್ತ


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-19 12:37:12
No Reviews