ಆರ್‌ಸಿಬಿ ಒಡತಿಗೆ ದೇಶಾದ್ಯಂತ ಮೆಚ್ಚುಗೆ – ಅಸ್ಸಾಂಗೆ ನೆರವಾದ ಅನನ್ಯಾ ಬಿರ್ಲಾ!

ನವದೆಹಲಿ: ಐಪಿಎಲ್‌ 2026ರಲ್ಲಿ ಸತತ ಎರಡನೇ ಬಾರಿ ಚಾಂಪಿಯನ್‌ ಆಗಿ ಇತಿಹಾಸ ನಿರ್ಮಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಸಂಭ್ರಮ ಇನ್ನೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ. ಇದೇ ವೇಳೆ, ಆರ್‌ಸಿಬಿಯ ನೂತನ ಸಹ-ಮಾಲಕಿ ಅನನ್ಯಾ ಬಿರ್ಲಾ ಮೈದಾನದ ಹೊರಗೆ ಮಾಡಿದ ಮಾನವೀಯ ಕಾರ್ಯದಿಂದ ದೇಶದಾದ್ಯಂತ ಭಾರೀ ಮೆಚ್ಚುಗೆ ಗಳಿಸಿದ್ದಾರೆ.

ಅಸ್ಸಾಂನಲ್ಲಿ ಉಂಟಾದ ಭೀಕರ ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರ ನೆರವಿಗೆ ಧಾವಿಸಿದ ಅನನ್ಯಾ ಬಿರ್ಲಾ, ಜೋರ್‌ಹಾಟ್ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಿದರು. ಸ್ಥಳಾಂತರಗೊಂಡ ಕುಟುಂಬಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ ಅವರು, ಅಗತ್ಯ ಪರಿಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದರು.

ತಮ್ಮ ಈ ಸೇವಾ ಕಾರ್ಯದ ಫೋಟೋ ಮತ್ತು ವಿಡಿಯೊಗಳನ್ನು ಅನನ್ಯಾ ಬಿರ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವು ವೈರಲ್ ಆಗಿವೆ. ಆರ್‌ಸಿಬಿ ಅಭಿಮಾನಿಗಳು ಸೇರಿದಂತೆ ಸಾವಿರಾರು ನೆಟ್ಟಿಗರು ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದ್ದು, "ಇವರೇ ಆರ್‌ಸಿಬಿಯ ನಿಜವಾದ ರಾಣಿ" ಎಂದು ಕೊಂಡಾಡುತ್ತಿದ್ದಾರೆ.

ಐಪಿಎಲ್‌ ಪಂದ್ಯಗಳ ವೇಳೆ ಹಲವು ತಂಡಗಳ ಮಾಲೀಕರು ಕ್ಯಾಮೆರಾಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಆದರೆ, ಆರ್‌ಸಿಬಿಯ ಸಹ-ಮಾಲಕಿಯಾಗಿದ್ದರೂ ಅನನ್ಯಾ ಬಿರ್ಲಾ ಟೂರ್ನಿಯ ಸಮಯದಲ್ಲಿ ಹೆಚ್ಚು ಪ್ರಚಾರದಿಂದ ದೂರವೇ ಉಳಿದಿದ್ದರು. ಈಗ ಸಂಕಷ್ಟದಲ್ಲಿರುವ ಜನರ ಮಧ್ಯೆ ನಿಂತು ನೆರವಿನ ಹಸ್ತ ಚಾಚುವ ಮೂಲಕ ನಿಜವಾದ ನಾಯಕತ್ವ ಮೈದಾನದಲ್ಲಷ್ಟೇ ಅಲ್ಲ, ಸಮಾಜ ಸೇವೆಯಲ್ಲಿಯೂ ತೋರಿಸಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಅನನ್ಯಾ ಬಿರ್ಲಾ ಫೌಂಡೇಶನ್ ವತಿಯಿಂದ ವಿತರಿಸಲಾದ ಪರಿಹಾರ ಕಿಟ್‌ಗಳಲ್ಲಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಾಬೂನು, ಟೂತ್‌ಪೇಸ್ಟ್‌, ಸ್ಯಾನಿಟರಿ ಪ್ಯಾಡ್‌, ಸೊಳ್ಳೆ ಪರದೆ, ತಾರ್ಪಾಲಿನ್ ಹಾಗೂ ಮಕ್ಕಳಿಗಾಗಿ ಶೈಕ್ಷಣಿಕ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡಿದ್ದವು.

ಈ ವೇಳೆ ಮಾತನಾಡಿದ ಅನನ್ಯಾ ಬಿರ್ಲಾ, ದೇಶದ ವಿವಿಧ ಭಾಗಗಳಲ್ಲಿ ನಡೆಸಿದ ಪರಿಹಾರ ನಿಧಿ ಸಂಗ್ರಹ ಅಭಿಯಾನದ ಮೂಲಕ ದೊರೆತ ನೆರವನ್ನು ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ತಲುಪಿಸಲು ತಮ್ಮ ತಂಡದೊಂದಿಗೆ ಬಂದಿರುವುದಾಗಿ ತಿಳಿಸಿದರು. ಜೊತೆಗೆ, ಸಂತ್ರಸ್ತರ ನೈಜ ಪರಿಸ್ಥಿತಿಯನ್ನು ಸ್ಥಳದಲ್ಲೇ ಅರಿತು ಅಗತ್ಯ ನೆರವು ಒದಗಿಸುವುದು ಈ ಭೇಟಿಯ ಮುಖ್ಯ ಉದ್ದೇಶ ಎಂದರು. ಪರಿಹಾರ ಕಾರ್ಯಕ್ಕೆ ಸಹಕರಿಸಿದ ದಾನಿಗಳು, ಸ್ವಯಂಸೇವಕರು ಹಾಗೂ ಸಹಭಾಗಿಗಳಿಗೆ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಅಸ್ಸಾಂ ಪ್ರವಾಹ ಪರಿಹಾರ ಕಾರ್ಯಕ್ಕಾಗಿ ಅನನ್ಯಾ ಬಿರ್ಲಾ ಫೌಂಡೇಶನ್ ಜುಲೈ 28ರಿಂದ ಆಗಸ್ಟ್ 2ರವರೆಗೆ ಮುಂಬೈ, ಬೆಂಗಳೂರು ಹಾಗೂ ಕೊಲ್ಕತಾದಲ್ಲಿ ವಿಶೇಷ ದೇಣಿಗೆ ಸಂಗ್ರಹ ಅಭಿಯಾನ ನಡೆಸಿತ್ತು. ಅಸ್ಸಾಂ ಪ್ರವಾಸದ ವೇಳೆ ಅನನ್ಯಾ ಪರಿಹಾರ ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಸಂತ್ರಸ್ತರ ತುರ್ತು ಅಗತ್ಯಗಳ ಬಗ್ಗೆ ಮಾಹಿತಿ ಪಡೆದು, ಅಗತ್ಯವಿರುವ ಪ್ರತಿಯೊಬ್ಬರಿಗೂ ನೆರವು ತಲುಪಿಸುವ ಭರವಸೆ ನೀಡಿದರು.

ಮೈದಾನದಲ್ಲಿ ಚಾಂಪಿಯನ್ ತಂಡದ ಸಹ-ಮಾಲಕಿಯಾಗಿರುವ ಅನನ್ಯಾ ಬಿರ್ಲಾ, ಈಗ ಸಮಾಜ ಸೇವೆಯ ಮೂಲಕವೂ ಲಕ್ಷಾಂತರ ಜನರ ಹೃದಯ ಗೆದ್ದಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-08-01 15:58:55
No Reviews