ಜೆಡಿಎಸ್‌ಗೆ ಜಮೀರ್ ವಾಪಸ್ಸು? ಸತ್ಯ ಏನು?

ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ ತೊರೆದು ಮತ್ತೆ ಜೆಡಿಎಸ್‌ಗೆ ಸೇರುತ್ತಿದ್ದಾರೆ ಎಂಬ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಜೊತೆ ಗೌಪ್ಯ ಮಾತುಕತೆ ನಡೆದಿದೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದವು. ಆದರೆ ಈ ಎಲ್ಲಾ ಸುದ್ದಿಗಳಿಗೆ ಸ್ವತಃ ಜಮೀರ್ ಅಹ್ಮದ್ ಖಾನ್ ಸ್ಪಷ್ಟವಾಗಿ ತೆರೆ ಎಳೆದಿದ್ದಾರೆ.

ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತು ಕ್ರಮದ ಹಿನ್ನೆಲೆ ಅವರು ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ “ಥೂ.. ಥೂ.. ಥೂ.. ಹಾಗೇನು ಇಲ್ಲ, ಇದು ಕೇವಲ ಊಹಾಪೋಹ. ನಾನು ಯಾಕೆ ಜೆಡಿಎಸ್‌ಗೆ ಹೋಗಲಿ? ನಾನು ಈಗಾಗಲೇ ಜೆಡಿಎಸ್ ಬಿಟ್ಟು ಬಂದಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು.

ತಮ್ಮ ರಾಜಕೀಯ ಪ್ರಯಾಣವನ್ನು ನೆನಪಿಸಿಕೊಂಡ ಅವರು, “2017ರಲ್ಲಿ ಕಾಂಗ್ರೆಸ್‌ಗೆ ಬಂದೆ, 2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾದೆ. ಜೆಡಿಎಸ್ ಸರ್ಕಾರದಲ್ಲೂ ನನಗೆ ಖಾತೆ ನೀಡಲಾಗಿತ್ತು. ನಂತರ ಕಾಂಗ್ರೆಸ್ ಸರ್ಕಾರದಲ್ಲೂ ನಿರೀಕ್ಷೆಗೂ ಮೀರಿದ ಖಾತೆಗಳು ದೊರೆತಿವೆ. ಹೀಗಿರುವಾಗ ಪಕ್ಷ ನನಗೆ ಏನು ಕಡಿಮೆ ಮಾಡಿದೆ?” ಎಂದು ಪ್ರಶ್ನಿಸಿದರು.

ತಮ್ಮ ವಿರುದ್ಧ ಹರಿದಾಡುತ್ತಿರುವ ಊಹಾಪೋಹಗಳನ್ನು ತಳ್ಳಿ ಹಾಕಿದ ಜಮೀರ್, “ನಾನು ಯಾರೊಂದಿಗೂ ರಹಸ್ಯ ಮಾತುಕತೆ ನಡೆಸಿಲ್ಲ. ನನಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಿದೆ. ಹೀಗಿರುವಾಗ ನಾನು ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-21 19:07:09
No Reviews