ಮತ್ತೊಂದು ವಿಶ್ವಕಪ್‌ಗೆ ಭಾರತ ಹಸಿವು!

ಕ್ರಿಕೆಟ್ ಪಯಣವು ಟೆಸ್ಟ್‌ ಹಣಾಹಣಿಯಿಂದ ಆರಂಭವಾಗಿ, ಏಕದಿನ ಪಂದ್ಯಗಳ ಮೂಲಕ ಅಭಿಮಾನಿಗಳ ಮನಸೂರೆಗೊಂಡು, ಇಂದಿಗೆ ಟಿ20 ರೂಪದಲ್ಲಿ ಅತಿದೊಡ್ಡ ಜನಪ್ರಿಯತೆಯನ್ನು ಗಳಿಸಿದೆ. ಕ್ರಿಕೆಟ್‌ನ ತವರೂರಾದ ಇಂಗ್ಲೆಂಡ್‌ನಲ್ಲಿ ಯುವಕರನ್ನು ಸೆಳೆಯುವ ಉದ್ದೇಶದಿಂದ ಇಸಿಬಿ ರೂಪಿಸಿದ ಚುಟುಕು ಕ್ರಿಕೆಟ್ ಕಲ್ಪನೆಯೇ 2003ರಲ್ಲಿ ಟಿ20 ಲೀಗ್‌ಗೆ ಜೀವ ನೀಡಿತು. ಕಡಿಮೆ ಅವಧಿ, ಭರಪೂರ ರಂಜನೆ ಹಾಗೂ ರೋಚಕ ಹೊಡೆದಾಟಗಳಿಂದ ಟಿ20 ಕ್ರಿಕೆಟ್ ಕ್ಷಿಪ್ರವಾಗಿ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸೆಳೆಯಿತು.

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತು. ಆ ಬಳಿಕ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ಕಿರೀಟ ಮುಡಿಗೇರಿಸಿದವು. ಇದುವರೆಗೆ ನಡೆದ 9 ಆವೃತ್ತಿಗಳಲ್ಲಿ ಭಾರತ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಲಾ ಎರಡು ಬಾರಿ ಟ್ರೋಫಿ ಗೆದ್ದು ಯಶಸ್ವಿ ತಂಡಗಳಾಗಿ ಹೊರಹೊಮ್ಮಿವೆ.

ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಯುವ ಭಾರತ ತಂಡ ಕಣಕ್ಕಿಳಿಯುತ್ತಿದ್ದು, ಮೂರನೇ ಬಾರಿ ಕಿರೀಟ ಗೆಲ್ಲುವ ಕನಸಿನೊಂದಿಗೆ ಅಭಿಯಾನ ಆರಂಭಿಸಿದೆ. ತವರಿನ ಲಾಭ, ಪ್ರತಿಭಾವಂತ ಯುವ ಪಡೆ ಮತ್ತು ಅಭಿಮಾನಿಗಳ ಭರವಸೆಯೊಂದಿಗೆ ಟೀಮ್ ಇಂಡಿಯಾ ಮತ್ತೊಂದು ವಿಶ್ವಕಪ್ ಜಯದತ್ತ ದೃಢ ಹೆಜ್ಜೆ ಇಡುತ್ತಿದೆ


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-07 15:30:04
No Reviews