ಪುರುಷರು ಇಲ್ಲ, ಫೆ.15ಕ್ಕೆ ಭಾರತ–ಪಾಕ್ ಮಹಿಳಾ ಮುಖಾಮುಖಿ

ಮುಂಬರುವ 2026ರ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಭಾರತ–ಪಾಕಿಸ್ತಾನ ಕ್ರಿಕೆಟ್ ವಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಫೆಬ್ರವರಿ 7ರಂದು ಭಾರತ ಮತ್ತು ಶ್ರೀಲಂಕಾದಲ್ಲಿ ಆರಂಭವಾಗಲಿರುವ ಪುರುಷರ ವಿಶ್ವಕಪ್‌ನಲ್ಲಿ ತಂಡದ ಭಾಗವಹಿಸುವಿಕೆ ಕುರಿತು ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರ ಅಚ್ಚರಿಯ ಘೋಷಣೆ ಮಾಡಿದೆ. ಫೆಬ್ರವರಿ 15ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ನಡೆಯಬೇಕಿದ್ದ ಲೀಗ್ ಹಂತದ ಪಂದ್ಯವನ್ನು ಪಾಕಿಸ್ತಾನ ಆಡದಿರಲು ನಿರ್ಧರಿಸಿದ್ದು, ಈ ತೀರ್ಮಾನ ಕ್ರಿಕೆಟ್ ಸಂಬಂಧಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲು ಸಜ್ಜಾಗಿದ್ದರೂ, ಭಾರತದ ವಿರುದ್ಧ ಮಾತ್ರ ಮೈದಾನಕ್ಕಿಳಿಯುವುದಿಲ್ಲ ಎನ್ನುವುದು ಚರ್ಚೆಗೆ ಕಾರಣವಾಗಿದೆ.

ಆದರೆ ಪುರುಷರ ತಂಡದ ಈ ನಿರ್ಧಾರದ ನಡುವೆಯೇ, ಮಹಿಳಾ ಕ್ರಿಕೆಟ್‌ನಲ್ಲಿ ಚಿತ್ರ ಸಂಪೂರ್ಣ ವಿಭಿನ್ನವಾಗಿದೆ. ಪಾಕಿಸ್ತಾನ ಮಹಿಳಾ ತಂಡ ಫೆಬ್ರವರಿ 15ರಂದು ಬ್ಯಾಂಕಾಕ್‌ನಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಮಹಿಳಾ ತಂಡಕ್ಕೆ ಇದುವರೆಗೆ ಪಾಕಿಸ್ತಾನ ಸರ್ಕಾರ ಅಥವಾ ಪಿಸಿಬಿಯಿಂದ ಯಾವುದೇ ನಿರ್ಬಂಧದ ಸೂಚನೆ ಬಂದಿಲ್ಲ ಎನ್ನಲಾಗಿದ್ದು, ಈ ಬೆಳವಣಿಗೆ ಕ್ರೀಡಾಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ಫೆಬ್ರವರಿ 13ರಿಂದ 22ರವರೆಗೆ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಈ ಮಹಿಳೆಯರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಭಾರತ ಎ ತಂಡ ಟೂರ್ನಿಯ ಮೊದಲ ದಿನ ಯುಎಇ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಫೆಬ್ರವರಿ 15ರಂದು ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವೆ ಹೈವೋಲ್ಟೇಜ್ ಮುಖಾಮುಖಿ ನಡೆಯಲಿದೆ.

ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ಎ, ಯುಎಇ ಹಾಗೂ ನೇಪಾಳ ಎ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಮಲೇಷ್ಯಾ ಮತ್ತು ಆತಿಥೇಯ ಥಾಯ್ಲೆಂಡ್ ಬಿ ಗುಂಪಿನಲ್ಲಿ ಸೇರಿವೆ. ಭಾರತ ತಂಡ ಫೆಬ್ರವರಿ 17ರಂದು ನೇಪಾಳ ವಿರುದ್ಧ ತನ್ನ ಮೂರನೇ ಹಾಗೂ ಅಂತಿಮ ಲೀಗ್ ಪಂದ್ಯ ಆಡಲಿದೆ. ಎರಡೂ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೇರಲಿದ್ದು, ಫೆಬ್ರವರಿ 20ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಟೂರ್ನಿಯ ಗ್ರ್ಯಾಂಡ್ ಫೈನಲ್ ಫೆಬ್ರವರಿ 22ಕ್ಕೆ ನಿಗದಿಯಾಗಿದೆ.

ಪುರುಷರ ಕ್ರಿಕೆಟ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ, ಮಹಿಳಾ ಕ್ರಿಕೆಟ್‌ನಲ್ಲಿ ಭಾರತ–ಪಾಕಿಸ್ತಾನ ಮುಖಾಮುಖಿ ನಡೆಯುತ್ತಿರುವುದು ಕ್ರೀಡೆಯ ಆತ್ಮ ಮತ್ತು ಕ್ರೀಡಾಭಿಮಾನಿಗಳ ನಿರೀಕ್ಷೆಯನ್ನು ಜೀವಂತವಾಗಿರಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-03 11:48:34
No Reviews