ಬಹಿಷ್ಕಾರ ವಿವಾದದ ನಡುವೆ ಶ್ರೀಲಂಕಾದಲ್ಲಿ ಪಾಕ್ ತಂಡ

ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ ಕುರಿತ ವಿವಾದದ ನಡುವೆಯೇ ಪಾಕಿಸ್ತಾನ ತಂಡ ತನ್ನ ವಿಶ್ವಕಪ್ ಸಿದ್ಧತೆಯನ್ನು ಮುಂದುವರಿಸಿದೆ. ಮಂಗಳವಾರ ಪಾಕಿಸ್ತಾನ ತಂಡಕ್ಕೆ ವಿಶ್ರಾಂತಿ ದಿನವಾಗಿದ್ದು, ಬುಧವಾರ ಕೊಲಂಬೊದಲ್ಲಿನ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಐರ್ಲೆಂಡ್ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿದೆ. ಬಳಿಕ ‘ಎ’ ಗುಂಪಿನಲ್ಲಿ ಪಾಕಿಸ್ತಾನ ತನ್ನ ಮೂರು ಲೀಗ್ ಪಂದ್ಯಗಳನ್ನು ಆಡಲಿದ್ದು, ಹಾಲಿ ಚಾಂಪಿಯನ್ ಭಾರತ, ಅಮೆರಿಕ, ನೆದರ್ಲ್ಯಾಂಡ್ಸ್ ಹಾಗೂ ನಮೀಬಿಯಾ ತಂಡಗಳೊಂದಿಗೆ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದೆ. 2009ರ ಚಾಂಪಿಯನ್ ಪಾಕಿಸ್ತಾನ ತಂಡ ಫೆಬ್ರವರಿ 7ರಂದು ನೆದರ್ಲ್ಯಾಂಡ್ಸ್ ವಿರುದ್ಧ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

ಇದರ ನಡುವೆಯೇ, ಭಾರತವನ್ನು ಎದುರಿಸದಿರಲು ಪಾಕಿಸ್ತಾನ ಸರ್ಕಾರ ತೆಗೆದುಕೊಂಡ ನಿರ್ಧಾರವು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನು ಐಸಿಸಿಯ ಅಸಮಾಧಾನಕ್ಕೆ ಒಳಪಡಿಸುವ ಸಾಧ್ಯತೆ ಇದೆ. ಐಸಿಸಿ ಈಗಾಗಲೇ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಿಸಿಬಿಗೆ ಸೂಚಿಸಿದ್ದು, ಅದನ್ನು ಪಾಲಿಸದಿದ್ದರೆ ದೀರ್ಘಾವಧಿಯ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದೆ.

ವರದಿಗಳ ಪ್ರಕಾರ, ಭಾರತ–ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ಸುಮಾರು ₹2200 ಕೋಟಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಈ ನಷ್ಟ ಐಸಿಸಿಗೆ ಮಾತ್ರ ಸೀಮಿತವಾಗದೇ ಪಾಕ್ ಕ್ರಿಕೆಟ್‌, ಬಿಸಿಸಿಐ, ಶ್ರೀಲಂಕಾ ಕ್ರಿಕೆಟ್‌, ಟೂರ್ನಿ ಪ್ರಾಯೋಜಕರು ಮತ್ತು ಜಾಹೀರಾತುದಾರರ ಮೇಲೂ ಪರಿಣಾಮ ಬೀರುವುದಾಗಿ ಅಂದಾಜಿಸಲಾಗಿದೆ. ಪ್ರಸಾರ ಹಕ್ಕು, ಜಾಹೀರಾತು, ಪ್ರಾಯೋಜಕತ್ವ, ಟಿಕೆಟ್ ಮಾರಾಟ ಹಾಗೂ (ಭಾರತದ ಹೊರಗಡೆ) ಕಾನೂನುಬದ್ಧ ಬೆಟ್ಟಿಂಗ್ ಸೇರಿದಂತೆ ಹಲವು ಮಾರ್ಗಗಳಿಂದ ಬರಬೇಕಿದ್ದ ಆದಾಯ ಕೈತಪ್ಪುವ ಆತಂಕ ಎದುರಾಗಿದೆ. ವಿಶೇಷವಾಗಿ ಜಾಹೀರಾತು ಆದಾಯದಲ್ಲೇ 200–250 ಕೋಟಿ ರೂ. ನಷ್ಟವಾಗಬಹುದು ಎನ್ನಲಾಗಿದೆ.

ಪಂದ್ಯ ರದ್ದಾದಲ್ಲಿ ಪ್ರಾಯೋಜಕರು ಮತ್ತು ಪ್ರಸಾರಕರಿಗೆ ಐಸಿಸಿ ನಷ್ಟ ಪರಿಹಾರ ನೀಡಬೇಕಾದ ಪರಿಸ್ಥಿತಿ ಉಂಟಾಗಬಹುದು. ಟಿಕೆಟ್ ಮಾರಾಟದ ಆದಾಯ ಕೈತಪ್ಪುವುದರ ಜೊತೆಗೆ, ಪಂದ್ಯ ಆಯೋಜನೆ ಹೊಣೆ ಹೊತ್ತಿದ್ದ ಲಂಕಾ ಕ್ರಿಕೆಟ್ ಮಂಡಳಿ ಕೂಡ ಐಸಿಸಿಯಿಂದ ಪರಿಹಾರ ಕೇಳುವ ಸಾಧ್ಯತೆ ಇದೆ. ಇದರ ಪರಿಣಾಮ ಇತರ ಸದಸ್ಯ ರಾಷ್ಟ್ರಗಳಿಗೂ ತಟ್ಟುವ ಆತಂಕವಿದೆ.

ಇದರ ನಡುವೆ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ಸಲ್ಮಾನ್ ಅಲಿ ಆಘಾ ನಾಯಕತ್ವ ವಹಿಸಿಕೊಂಡಿದ್ದಾರೆ. ತಂಡದಲ್ಲಿ ಬಾಬರ್ ಅಜಂ, ಶಾಹೀನ್ ಶಾ ಆಫ್ರಿದಿ, ಫಖರ್ ಜಮಾನ್, ಶಾದಾಬ್ ಖಾನ್, ನಸೀಮ್ ಶಾ, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಖವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್‌ಜಾದಾ ಫರ್ಹಾನ್, ಸೈಮ್ ಅಯೂಬ್, ಉಸ್ಮಾನ್ ಖಾನ್ ಹಾಗೂ ಉಸ್ಮಾನ್ ತಾರಿಖ್ ಸೇರಿದಂತೆ ಅನುಭವ ಮತ್ತು ಯುವಶಕ್ತಿಯ ಸಮನ್ವಯ ಕಂಡುಬರುತ್ತಿದೆ.

ವಿವಾದಗಳ ನಡುವೆಯೂ ಟಿ20 ವಿಶ್ವಕಪ್ ವೇದಿಕೆಯಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-03 11:32:26
No Reviews