ಟೆಸ್ಟ್ ಕ್ಯಾಪ್ಟನ್ಸಿ ಬಿಡುವ ನಿರ್ಧಾರ ಹಿಂದೆ ಇದ್ದ ಕಾರಣವೇನು? ಕೊಹ್ಲಿ ಉತ್ತರ

ನವದೆಹಲಿ: ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ (Virat Kohli), 2022ರಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ಟೆಸ್ಟ್ ನಾಯಕತ್ವ ತೊರೆದ ನಿರ್ಧಾರದ ಹಿಂದೆ ಇದ್ದ ನಿಜವಾದ ಕಾರಣವನ್ನು ಇದೀಗ ಬಹಿರಂಗಪಡಿಸಿದ್ದಾರೆ. ನಾಯಕತ್ವ ಮತ್ತು ಬ್ಯಾಟಿಂಗ್ ಎಂಬ ಎರಡು ದೊಡ್ಡ ಜವಾಬ್ದಾರಿಗಳನ್ನು ಒಂದೇ ಸಮಯದಲ್ಲಿ ನಿರ್ವಹಿಸುವುದು ತಮ್ಮ ಮೇಲೆ ಭಾರೀ ಒತ್ತಡ ತಂದಿತ್ತು ಎಂದು ಕೊಹ್ಲಿ ಮನಮುಟ್ಟುವಂತೆ ಹೇಳಿದ್ದಾರೆ.

ಆರ್‌ಸಿಬಿ ಇನೋವೇಷನ್ ಲ್ಯಾಬ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ, “ತಂಡದ ಪ್ರಮುಖ ಬ್ಯಾಟರ್ ಆಗಿಯೂ, ನಾಯಕನಾಗಿಯೂ ಜವಾಬ್ದಾರಿ ನಿಭಾಯಿಸುವುದು ತುಂಬಾ ಕಠಿಣವಾಗಿತ್ತು. ಆ ಒತ್ತಡ ನನ್ನ ದಿನನಿತ್ಯದ ಬದುಕಿನ ಮೇಲೂ ಪರಿಣಾಮ ಬೀರತೊಡಗಿತ್ತು. ಆದರೆ ಭಾರತೀಯ ಕ್ರಿಕೆಟ್ ಯಾವಾಗಲೂ ಶ್ರೇಷ್ಠ ಸ್ಥಾನದಲ್ಲಿರಬೇಕು ಎಂಬ ಕಾರಣಕ್ಕೆ ನಾನು ಅದನ್ನೆಲ್ಲಾ ಮರೆತು ಮುಂದೆ ಸಾಗುತ್ತಿದ್ದೆ,” ಎಂದರು.

“ನಾಯಕತ್ವ ತೊರೆಯುವ ವೇಳೆಗೆ ನಾನು ಸಂಪೂರ್ಣವಾಗಿ ಖಾಲಿಯಾಗಿದ್ದೆ. ನನ್ನೊಳಗೆ ಯಾವುದೇ ಶಕ್ತಿ ಉಳಿದಿರಲಿಲ್ಲ. ಆ ಜವಾಬ್ದಾರಿಗಳು ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದವು,” ಎಂದು ಕೊಹ್ಲಿ ಭಾವುಕರಾಗಿ ನೆನಪಿಸಿಕೊಂಡರು.

ವಿರಾಟ್ ಕೊಹ್ಲಿ ಭಾರತ ತಂಡವನ್ನು 68 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿ, ಅದರಲ್ಲಿ 40 ಗೆಲುವು ದಾಖಲಿಸಿದ್ದರು. ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿ ಅವರು ಇತಿಹಾಸ ನಿರ್ಮಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ವಿದೇಶಿ ನೆಲದಲ್ಲೂ ಆಕ್ರಮಣಕಾರಿ ಕ್ರಿಕೆಟ್ ಪ್ರದರ್ಶಿಸಿ ಹೊಸ ಆತ್ಮವಿಶ್ವಾಸ ಪಡೆದುಕೊಂಡಿತ್ತು.

ಟೆಸ್ಟ್ ನಾಯಕತ್ವ ತೊರೆದ ಬಳಿಕ ಕೊಹ್ಲಿ ಅವರ ಫಾರ್ಮ್ ಕುಸಿತ ಕಂಡಿತ್ತು. ಬಳಿಕ ಅವರು 2025ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. 123 ಟೆಸ್ಟ್ ಪಂದ್ಯಗಳಲ್ಲಿ 9,230 ರನ್, 30 ಶತಕ ಮತ್ತು 46.85ರ ಸರಾಸರಿಯೊಂದಿಗೆ ಕೊಹ್ಲಿ ತಮ್ಮ ಟೆಸ್ಟ್ ಕರಿಯರ್ ಅನ್ನು ಮುಕ್ತಾಯಗೊಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ದಾಖಲಿಸಿದ್ದ ಅಜೇಯ 254 ರನ್‌ಗಳು ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-20 15:16:12
No Reviews