ವಿಕಲ್ಪ ಟ್ರೈಲರ್‌ ದಾಳಿ ಮನಸ್ಸು ಹಿಡಿದಿಡುವ ಥ್ರಿಲ್ಲರ್‌

ಯಾರೆಲ್ಲ ಇದ್ದಾರೆ?
ಯುವ ಪ್ರತಿಭೆ ಪೃಥ್ವಿರಾಜ್ ಪಾಟೀಲ್‌ ‘ವಿಕಲ್ಪ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ನಾಗಶ್ರೀ ಹೆಬ್ಬಾರ್‌, ಹರಿಣಿ ಶ್ರೀಕಾಂತ್‌, ಸಂಧ್ಯಾ ವಿನಾಯಕ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್‌, ಪೂಜಾ ಬಚ್ಚ್‌, ಜಯಂತ್ ಡೇವಿಡ್‌, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್‌, ಗಿರೀಶ್ ಹೆಗಡೆ ಸೇರಿದಂತೆ ಹಲವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ಜಯತೀರ್ಥ ‘ವಿಕಲ್ಪ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಜಯತೀರ್ಥ, ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರ್ತಿರುವುದು ಖುಷಿಯ ವಿಚಾರ. ಹೊಸಬರ ಆಲೋಚನೆಗಳು ಹೊಸ ಸಿನಿಮಾಗಳಾಗಿ ತೆರೆ ಮೇಲೆ ಮೂಡಿಬರುತ್ತಿವೆ. ‘ವಿಕಲ್ಪ’ ಚಿತ್ರದ ತಂಡದವರು ನನಗೆ ಪರಿಚಿತರಲ್ಲದಿದ್ದರೂ, ಒಳ್ಳೆಯ ಕಂಟೆಂಟ್ ಆಧಾರಿತ ಸಿನಿಮಾ ಮಾಡಬೇಕೆಂಬ ಅವರ ಪ್ರಾಮಾಣಿಕ ಪ್ರಯತ್ನ ಮನಸ್ಸಿಗೆ ತಾಕಿತು. ಕಥಾಹಂದರ, ಮೇಕಿಂಗ್‌, ಟೀಸರ್‌, ಹಾಡುಗಳು ಚಿತ್ರದ ಬಗ್ಗೆ ಭರವಸೆ ಮೂಡಿಸುತ್ತಿವೆ” ಎಂದು ಹೇಳಿದರು.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಟ–ನಿರ್ದೇಶಕ ಪೃಥ್ವಿರಾಜ್ ಪಾಟೀಲ್‌, ಇದು ‘ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್’ (ಪಿಟಿಎಸ್‌ಡಿ) ಹಿನ್ನೆಲೆಯ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಒಬ್ಬ ವ್ಯಕ್ತಿಯ ಮನಸ್ಸಿನ ಭ್ರಮೆ ಮತ್ತು ವಾಸ್ತವದ ನಡುವಿನ ಸಂಘರ್ಷವೇ ಚಿತ್ರದ ಹೃದಯ. ವೈಜ್ಞಾನಿಕ ಅಂಶಗಳು ಮತ್ತು ತಜ್ಞರ ಸಲಹೆ ಮೇರೆಗೆ ಪಾತ್ರಗಳು ಹಾಗೂ ಸನ್ನಿವೇಶಗಳನ್ನು ರೂಪಿಸಿದ್ದೇವೆ” ಎಂದರು.

ನಾಯಕಿ ನಾಗಶ್ರೀ ಹೆಬ್ಬಾರ್‌, ರಂಗಭೂಮಿ ಹಿನ್ನೆಲೆಯಿಂದ ಬಂದ ನನಗೆ ಇದು ಮೊದಲ ಚಿತ್ರ. ಸಮುದ್ಯತಾ ಎಂಬ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆ ಮತ್ತು ಪಾತ್ರದ ಬಗ್ಗೆ ನನಗೆ ಹೆಚ್ಚಿನ ನಿರೀಕ್ಷೆಯಿದೆ” ಎಂದು ತಮ್ಮ ಭಾವನೆ ಹಂಚಿಕೊಂಡರು. ಮನಶಾಸ್ತ್ರಜ್ಞೆಯ ಪಾತ್ರದಲ್ಲಿ ನಟಿಸಿರುವ ಹರಿಣಿ ಶ್ರೀಕಾಂತ್‌, ಹೊಸಬರಿದ್ದರೂ ತಂಡ ತುಂಬ ವೃತ್ತಿಪರವಾಗಿ ಸಿನಿಮಾ ಮಾಡಿದ್ದಾರೆ. ಇಂಥ ಪ್ರಯತ್ನಗಳಿಗೆ ಪ್ರೇಕ್ಷಕರ ಬೆಂಬಲ ಅಗತ್ಯ” ಎಂದರು.

ಎಲ್ಲೆಲ್ಲಿ ಚಿತ್ರೀಕರಣ?
ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ಹಾಗೂ ಸಿಂಗಪುರ, ನೆದರ್ಲ್ಯಾಂಡ್‌ಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಮಿಥುನ್ ತೀರ್ಥಹಳ್ಳಿ ಸಹ ನಿರ್ದೇಶನ ಮಾಡಿದ್ದು, ಅಭಿರಾಮ್ ಗೌಡ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನದ ಹೊಣೆ ವಹಿಸಿದ್ದಾರೆ. ಸಂವತ್ಸರ ಸಂಗೀತ ಸಂಯೋಜಿಸಿರುವ ‘ವಿಕಲ್ಪ’ದ ಹಾಡುಗಳು ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದ್ದು, ಜನವರಿ 30ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-20 11:24:05
No Reviews