ಬೆಂಗಳೂರು–ಮಂಗಳೂರು ವಂದೇ ಭಾರತ್ ಶೀಘ್ರ ಆರಂಭ!

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ,ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅಧಿಕೃತವಾಗಿ ಘೋಷಿಸಿದರು. ಜೊತೆಗೆ ಬೆಂಗಳೂರು–ಮುಂಬೈ ಪ್ರೀಮಿಯಂ ರೈಲು ಸೇವೆ ಮತ್ತು ಪುಣೆ–ಬೆಂಗಳೂರು ರೈಲು ಕಾರಿಡಾರ್ ಯೋಜನೆಗಳ ಕುರಿತಾದ ಮಾಹಿತಿ ನೀಡಿದರು.

ಹಾಸನ–ಮಂಗಳೂರು ರೈಲ್ವೇ ಮಾರ್ಗದ ವಿದ್ಯುದೀಕರಣ ಕಾರ್ಯ ಸಂಪೂರ್ಣಗೊಂಡಿದ್ದು, ರೈಲು ಸಂಚಾರ ಆರಂಭಕ್ಕೂ ಮುನ್ನ ಅಗತ್ಯ ಪರೀಕ್ಷೆಗಳು ಹಾಗೂ ಸುರಕ್ಷತಾ ಪರಿಶೀಲನೆಗಳು ನಡೆಯಲಿವೆ. ಈ ಪ್ರಕ್ರಿಯೆಗಳು ಮುಗಿದ ನಂತರ ರೈಲುಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಕಾರವಾರದವರೆಗೂ ವಿಸ್ತರಿಸಿ ಕರ್ನಾಟಕದ ಸಂಪೂರ್ಣ ಕರಾವಳಿ ಭಾಗವನ್ನು ಒಳಗೊಳ್ಳುವ ಯೋಜನೆ ಇದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಸ್ತುತ ಕರ್ನಾಟಕದಲ್ಲಿ 12 ಜೋಡಿ ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಭವಿಷ್ಯದಲ್ಲಿ ಇಡೀ ರಾಜ್ಯದಲ್ಲಿ ಇನ್ನಷ್ಟು ವಂದೇ ಭಾರತ್ ರೈಲುಗಳನ್ನು ಆರಂಭಿಸಲಾಗುವುದು ಎಂಬ ಭರವಸೆಯನ್ನು ಸಚಿವರು ನೀಡಿದರು. ಕರಾವಳಿ ಪ್ರದೇಶ ವ್ಯಾಪಾರ ಹಾಗೂ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿರುವುದರಿಂದ, ಕರಾವಳಿ–ಬೆಂಗಳೂರು ಮತ್ತು ಬೆಂಗಳೂರು–ಕರಾವಳಿ ಎರಡು ದಿಕ್ಕುಗಳಲ್ಲಿ ಸೇವೆ ಇರಲಿದೆ ಎಂದು ಹೇಳಿದರು.

ಇದಲ್ಲದೆ, ಬೆಂಗಳೂರು–ಚೆನ್ನೈ ಹೈಸ್ಪೀಡ್ ಕಾರಿಡಾರ್ ಯೋಜನೆಯಿಂದ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಕೇವಲ 73 ನಿಮಿಷಗಳಿಗೆ ಇಳಿಯಲಿದೆ. ಹೈದರಾಬಾದ್–ಬೆಂಗಳೂರು ಪ್ರಯಾಣ ಕೇವಲ ಎರಡು ಗಂಟೆಗಳಲ್ಲಿ ಸಾಧ್ಯವಾಗಲಿದೆ, ಇದು ದಕ್ಷಿಣ ಭಾರತದ ಹೈಸ್ಪೀಡ್ ಡೈಮಂಡ್ ಕಾರಿಡಾರ್‌ನ ಭಾಗವಾಗಿರುತ್ತದೆ.

ಬುಲೆಟ್ ರೈಲು ಯೋಜನೆ ಕುರಿತು ಮಾತನಾಡಿದ ಸಚಿವರು, ಮೊದಲ ಹಂತದಲ್ಲಿ ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆ ಪೂರ್ಣಗೊಳ್ಳುತ್ತಿದ್ದು, ಎರಡನೇ ಹಂತದಲ್ಲಿ 7 ಹೊಸ ಬುಲೆಟ್ ರೈಲು ಕಾರಿಡಾರ್‌ಗಳಿಗೆ ಅನುಮೋದನೆ ಸಿಕ್ಕಿದೆ ಎಂದರು. ವಿಕ್ಷಿತ್ ಭಾರತ್ ಮಾರ್ಗನಕ್ಷೆಯಡಿ, ದೇಶದಲ್ಲಿ ಬುಲೆಟ್ ರೈಲು ಕಾರಿಡಾರ್‌ಗಳ ಒಟ್ಟು ಉದ್ದವನ್ನು 7,000 ಕಿ.ಮೀಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-09 16:49:25
No Reviews