ಹೊರ್ಮುಜ್ ಜಲಸಂಧಿ ಸಂಘರ್ಷ: 40 ರಾಷ್ಟ್ರಗಳಿಂದ ತೈಲ ಆಮದುಗೆ ಭಾರತ ಮುಂದಾಳಿ

ಹೊರ್ಮುಜ್ ಸಂಕಷ್ಟ: ತೈಲ ಭದ್ರತೆಗೆ ಭಾರತ 40 ರಾಷ್ಟ್ರಗಳತ್ತ ಮುಖ

ನವದೆಹಲಿ, ಮಾ.11: ಇರಾನ್ ಮತ್ತು ಅಮೆರಿಕ–ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹೊರ್ಮುಜ್ ಜಲಸಂಧಿ ಮೇಲೆ ಸಂಕಷ್ಟ ಕವಿದಿದೆ. ಇರಾನ್ ಈ ಮಾರ್ಗವನ್ನು ಬಂದ್ ಮಾಡಿದ ಪರಿಣಾಮ ಜಾಗತಿಕ ತೈಲ ಪೂರೈಕೆಗೂ ಹೊಡೆತ ಬಿದ್ದಿದೆ.

ಈ ಪರಿಸ್ಥಿತಿಯಲ್ಲಿ ಭಾರತದ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರ ಮಹತ್ವದ ಕಾರ್ಯತಂತ್ರದ ನಿರ್ಧಾರ ಕೈಗೊಂಡಿದ್ದು, ಕಚ್ಚಾ ತೈಲ ಆಮದು ಮಾಡುವ ದೇಶಗಳ ಸಂಖ್ಯೆಯನ್ನು 27ರಿಂದ 40 ರಾಷ್ಟ್ರಗಳಿಗೆ ವಿಸ್ತರಿಸಿದೆ. ಈಗಾಗಲೇ ಭಾರತದ ಒಟ್ಟು ಕಚ್ಚಾ ತೈಲ ಆಮದಿನ ಸುಮಾರು 60% ಭಾಗವು ಪರ್ಯಾಯ ಮಾರ್ಗಗಳ ಮೂಲಕ ದೇಶಕ್ಕೆ ಆಗಮಿಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯ ನಡುವೆ ಇರುವ ಹೊರ್ಮುಜ್ ಜಲಸಂಧಿ ವಿಶ್ವದ ಒಟ್ಟು ಇಂಧನ ಪೂರೈಕೆಯ ಸುಮಾರು 20% ಸಾಗಾಣಿಕೆಗೆ ಪ್ರಮುಖ ಮಾರ್ಗವಾಗಿದೆ. ಆದರೆ ಇರಾನ್ ದಾಳಿಗಳ ಹಿನ್ನೆಲೆ ಈ ಮಾರ್ಗದಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ.

ಈ ಬಿಕ್ಕಟ್ಟಿನ ನಡುವೆ ಭಾರತ ಅಲ್ಜೀರಿಯಾ, ಅಂಗೋಲಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಇರಾಕ್, ಕುವೈತ್, ನೈಜೀರಿಯಾ, ನಾರ್ವೆ, ಸೌದಿ ಅರೇಬಿಯಾ, ಯುಎಇ, ಅಮೆರಿಕ, ವೆನೆಜುವೆಲಾ ಸೇರಿದಂತೆ ಹಲವಾರು ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಿ ತೈಲ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದೆ.

ಇದಕ್ಕೂ ಹೊರತಾಗಿ ರಷ್ಯಾ ಇನ್ನೂ ಭಾರತದ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರವಾಗಿಯೇ ಮುಂದುವರಿದಿದೆ. ಕಳೆದ ತಿಂಗಳು ಮಾತ್ರ ಭಾರತವು ರಷ್ಯಾದಿಂದ ದಿನಕ್ಕೆ ಸರಾಸರಿ 2.04 ಮಿಲಿಯನ್ ಬ್ಯಾರೆಲ್ ತೈಲವನ್ನು ಖರೀದಿಸಿದ್ದು, ಇದು ದೇಶದ ಒಟ್ಟು ಪೂರೈಕೆಯ ಸುಮಾರು 20% ಆಗಿದೆ.

ಭಾರತದ ತೈಲ ಸಂಗ್ರಹ ಸಾಮರ್ಥ್ಯ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಮಾಹಿತಿ ನೀಡಿದಂತೆ, ಭಾರತವು ಪ್ರಸ್ತುತ 74 ದಿನಗಳ ಕಾಲ ಸಾಕಾಗುವ ತೈಲ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರಲ್ಲಿ 5.33 ಮಿಲಿಯನ್ ಮೆಟ್ರಿಕ್ ಟನ್ ಆಯಕಟ್ಟಿನ ಪೆಟ್ರೋಲಿಯಂ ಮೀಸಲು (SPR) ಇದ್ದು, ತುರ್ತು ಪರಿಸ್ಥಿತಿಯಲ್ಲಿ ಸುಮಾರು 9.5 ದಿನಗಳ ಪೂರೈಕೆಗೆ ಸಾಕಾಗುತ್ತದೆ.

ಇದರ ಜೊತೆಗೆ ತೈಲ ಮಾರಾಟ ಕಂಪನಿಗಳು (OMCs) ಹೊಂದಿರುವ ದಾಸ್ತಾನು 64.5 ದಿನಗಳ ಪೂರೈಕೆಗೆ ನೆರವಾಗಲಿದೆ ಎಂದು ತಿಳಿಸಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-11 14:59:31
No Reviews