ರಾಮ್‌ಚರಣ್‌ಗೆ ಭರ್ಜರಿ ಸಪೋರ್ಟ್‌; ‘ಪೆದ್ದಿ’ ನೋಡಿ ಹರ್ಷ ವ್ಯಕ್ತಪಡಿಸಿದ ಉಪಾಸನಾ

‘ಪೆದ್ದಿ’ ಪ್ರೀಮಿಯರ್‌ನಲ್ಲಿ ಉಪಾಸನಾ ಸಂಭ್ರಮ: ಅಭಿಮಾನಿಗಳ ಜೊತೆ ಹರ್ಷೋದ್ಗಾರ

ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಅಭಿನಯದ, ಬುಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಜೂನ್ 4ರಂದು ವಿಶ್ವಾದ್ಯಂತ ಬಿಡುಗಡೆಯಾಗುವ ಮುನ್ನ ಜೂನ್ 3ರಂದು ಹೈದರಾಬಾದ್‌ನಲ್ಲಿ ವಿಶೇಷ ಪ್ರೀಮಿಯರ್ ಪ್ರದರ್ಶನ ಕಂಡಿತು. ಪ್ರೀಮಿಯರ್‌ಗೆ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿ ಚಿತ್ರಮಂದಿರವನ್ನು ಸಂಭ್ರಮದ ವಾತಾವರಣದಿಂದ ತುಂಬಿಸಿದರು.

ಈ ವಿಶೇಷ ಪ್ರದರ್ಶನದಲ್ಲಿ ರಾಮ್ ಚರಣ್ ಅವರ ಪತ್ನಿ ಹಾಗೂ ಉದ್ಯಮಿ ಉಪಾಸನಾ ಕೊನಿಡೇಲಾ ಗಮನ ಸೆಳೆದರು. ಅವರು ಅಭಿಮಾನಿಗಳ ನಡುವೆ ಕುಳಿತು ಚಿತ್ರವನ್ನು ವೀಕ್ಷಿಸಿ, ಪ್ರತಿಯೊಂದು ಕ್ಷಣವನ್ನೂ ಆನಂದಿಸಿದರು. ಪರದೆಯ ಮೇಲೆ ರಾಮ್ ಚರಣ್ ಕಾಣಿಸಿಕೊಂಡ ಕ್ಷಣಗಳಲ್ಲಿ ಥಿಯೇಟರ್‌ನಲ್ಲಿ ಶಿಳ್ಳೆ, ಚಪ್ಪಾಳೆ ಮತ್ತು ಹರ್ಷೋದ್ಗಾರ ಗಗನಕ್ಕೇರಿದ ದೃಶ್ಯಗಳು ಕಂಡುಬಂದವು.

ಉಪಾಸನಾ ಸಹ ಅಭಿಮಾನಿಗಳ ಜೊತೆಗೆ ನಗುತ, ಹರ್ಷೋದ್ಗಾರ ಮಾಡುತ್ತಾ ಸಂಪೂರ್ಣವಾಗಿ ಸಂಭ್ರಮದಲ್ಲಿ ಪಾಲ್ಗೊಂಡರು. ಪ್ರೀಮಿಯರ್ ಬಳಿಕ ಭದ್ರತಾ ಸಿಬ್ಬಂದಿಗಳೊಂದಿಗೆ ಹೊರಬರುತ್ತಿದ್ದ ವೇಳೆ ಅವರು ಚಿತ್ರ ಕುರಿತು ತೀವ್ರ ಸಂತೋಷ ವ್ಯಕ್ತಪಡಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

‘ಉಪ್ಪೇನಾ’ ನಂತರ ಬುಚಿ ಬಾಬು ಸನಾ ನಿರ್ದೇಶನದ ಎರಡನೇ ಚಿತ್ರವಾದ ‘ಪೆದ್ದಿ’ಯಲ್ಲಿ ಶಿವ ರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಮತ್ತು ಬೋಮನ್ ಇರಾನಿ ಸೇರಿದಂತೆ ಹಲವು ಪ್ರಮುಖ ನಟರು ಅಭಿನಯಿಸಿದ್ದಾರೆ.

ವೃದ್ಧಿ ಸಿನಿಮಾಸ್ ನಿರ್ಮಾಣದ ಈ ಚಿತ್ರವನ್ನು ಐವಿವೈ ಎಂಟರ್‌ಟೈನ್‌ಮೆಂಟ್ ಸಹ-ನಿರ್ಮಾಣ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಪ್ರಸ್ತುತಪಡಿಸುತ್ತಿವೆ.

ಕರ್ನಾಟಕದಲ್ಲೂ ‘ಪೆದ್ದಿ’ಗೆ ಭರ್ಜರಿ ಪ್ರತಿಕ್ರಿಯೆ ದೊರಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಲೈವ್ ಅಪ್‌ಡೇಟ್‌ಗಳು ಹರಿದುಬರುತ್ತಿವೆ. ಬೆಂಗಳೂರಿನಲ್ಲಿ ಅಭಿಮಾನಿಗಳು ದೊಡ್ಡ ಕಟೌಟ್‌ಗಳು, ಹೂವಿನ ಹಾರಗಳು ಹಾಗೂ ಸಂಭ್ರಮಾಚರಣೆಗಳೊಂದಿಗೆ ಚಿತ್ರವನ್ನು ಆಚರಿಸುತ್ತಿದ್ದಾರೆ.

ಇನ್ನು, ಶಿವರಾಜ್‌ಕುಮಾರ್ ಪಾತ್ರಕ್ಕೂ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಹಾಡುಗಳು, ದೃಶ್ಯ ವೈಭವ ಮತ್ತು ಭಾವನಾತ್ಮಕ ಕಥಾಹಂದರ ಚಿತ್ರವನ್ನು ಬ್ಲಾಕ್‌ಬಸ್ಟರ್ ಹಾದಿಯತ್ತ ಕೊಂಡೊಯ್ಯುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-06-04 15:40:31
No Reviews