ಉಡುಪಿಯಲ್ಲಿ ಭೀಕರ ಅಪಘಾತ ಟ್ಯಾಂಕರ್‌ಗೆ ಬಸ್ ಡಿಕ್ಕಿ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ಬದಿ ನಿಂತಿದ್ದ ಪೆಟ್ರೋಲ್ ಟ್ಯಾಂಕರ್‌ಗೆ ಅತಿ ವೇಗದಲ್ಲಿ ಬಂದ ಪ್ರವಾಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ದುರ್ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ವಿದ್ಯಾರ್ಥಿಗಳು ಶಂಕರಘಟ್ಟದ ರಂಭಾಪುರಿ ಕಾಲೇಜಿನಿಂದ ಕರಾವಳಿ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮುರುಡೇಶ್ವರದಿಂದ ಉಡುಪಿಯತ್ತ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಒಟ್ಟು 47 ಮಂದಿ ಇದ್ದರು ಎಂದು ತಿಳಿದುಬಂದಿದೆ. ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-29 16:23:58
No Reviews