ತಮಿಳುನಾಡು ಚುನಾವಣೆಯಲ್ಲಿ ಟಿವಿಕೆ ಭರ್ಜರಿ ಜಯ: ಇತಿಹಾಸ ನಿರ್ಮಿಸಿದ ವಿಜಯ್

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶವನ್ನೇ ಅಚ್ಚರಿಗೆ ತಳ್ಳಿದ್ದು, ನಟ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ (ಟಿವಿಕೆ)’ ಪಕ್ಷ ಅಭೂತಪೂರ್ವ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ಹೆಸರು ಮುನ್ನೆಲೆಗೆ ಬರುತ್ತಿರುವುದರಿಂದ ತಮಿಳು ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾದಂತಾಗಿದೆ.

ಈ ವಿಜಯಯಾನದ ಹಿಂದಿನ ಮತ್ತೊಂದು ಕುತೂಹಲಕರ ಅಂಶವೆಂದರೆ ‘ವೆಟ್ರಿ’ ಎಂಬ ಪದದ ಪ್ರತಿಧ್ವನಿ. ವಿಜಯ್ ಅವರ ಮೊದಲ ಬಾಲನಟನ ಚಿತ್ರವೇ ‘ವೆಟ್ರಿ’. ತಮಿಳಿನಲ್ಲಿ ‘ವೆಟ್ರಿ’ ಎಂದರೆ ವಿಜಯ. ಬಾಲ್ಯದಲ್ಲೇ ‘ವಿಜಯ’ದ ಅರ್ಥವನ್ನು ಜೊತೆಗಿಟ್ಟುಕೊಂಡೇ ಬಂದ ಅವರು, ಇಂದು ರಾಜಕೀಯದಲ್ಲೂ ಅದೇ ಹೆಸರನ್ನು ಪ್ರತಿಬಿಂಬಿಸಿದ್ದಾರೆ.

90ರ ದಶಕದಲ್ಲಿ ಕಾಲಿವುಡ್‌ಗೆ ಪ್ರವೇಶಿಸಿದ ವಿಜಯ್, ರಜನಿಕಾಂತ್, ಕಮಲ್ ಹಾಸನ್, ವಿಜಯಕಾಂತ್ ಮುಂತಾದ ದಿಗ್ಗಜರ ನಡುವೆ ತಮ್ಮದೇ ಆದ ಅಭಿಮಾನಿ ಬಳಗವನ್ನು ನಿರ್ಮಿಸಿದರು. ಕಾಲಕ್ರಮೇಣ ಸೂರ್ಯ, ಅಜಿತ್, ವಿಕ್ರಮ್ ಸೇರಿದಂತೆ ಸಮಕಾಲೀನ ನಟರೊಂದಿಗೆ ಪೈಪೋಟಿ ನಡೆಸಿ, ತಮಿಳು ಚಿತ್ರರಂಗದ ಅಗ್ರಸ್ಥಾನಕ್ಕೆ ಏರಿದರು.

ರಾಜಕೀಯದ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡದಿದ್ದರೂ, ಒಳಗಿನಿಂದ ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದ ವಿಜಯ್, 2024ರಲ್ಲಿ ತಮ್ಮ ಪಕ್ಷವನ್ನು ಘೋಷಿಸಿ ರಾಜಕೀಯ ಪ್ರವೇಶಿಸಿದರು. ಆರಂಭದಲ್ಲಿ ಮೌನವಾಗಿದ್ದರೂ ನಂತರ ಜನಸಂಪರ್ಕ ಸಭೆಗಳ ಮೂಲಕ ರಾಜ್ಯದಾದ್ಯಂತ ಸಕ್ರಿಯರಾದರು.

“ವೆಟ್ರಿ ನಿಶ್ಚಯಂ” ಎಂಬ ಘೋಷಣೆಯೊಂದಿಗೆ ಜನರನ್ನು ಉತ್ಸಾಹಗೊಳಿಸಿದ ಅವರ ಪ್ರಚಾರ ಶೈಲಿ ವಿಶಿಷ್ಟವಾಗಿತ್ತು. ಅಡ್ಡಿಗಳು ಮತ್ತು ಟೀಕೆಗಳನ್ನು ಲೆಕ್ಕಿಸದೇ ಅವರು ತಮ್ಮ ರಾಜಕೀಯ ಯಾತ್ರೆಯನ್ನು ಮುಂದುವರಿಸಿದರು.

ಎಕ್ಸಿಟ್ ಪೋಲ್‌ಗಳಿಗೂ ಅರ್ಥವಾಗದ ಮಟ್ಟಿಗೆ ನಿಗೂಢವಾಗಿ ನಡೆದ ಅವರ ತಂತ್ರಗಳು ಇದೀಗ ಫಲ ನೀಡಿದ್ದು, ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡಿವೆ. ಚಿತ್ರರಂಗದಿಂದ ರಾಜಕೀಯದ ಗದ್ದುಗೆಯವರೆಗೆ ವಿಜಯ್ ಅವರ ಈ ಏರಿಕೆ, ತಮಿಳು ರಾಜಕಾರಣದಲ್ಲಿ ಹೊಸ ಯುಗದ ಆರಂಭವೆಂದು ವಿಶ್ಲೇಷಿಸಲಾಗುತ್ತಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-04 13:18:37
No Reviews