ತಿರುಪತಿ ಲಡ್ಡು ತಯಾರಿಕೆಯಲ್ಲಿ ಶೌಚಾಲಯ ಸ್ವಚ್ಛತಾ ರಾಸಾಯನಿಕ ಬಳಕೆ?

ಕರ್ನೂಲ್ ಜಿಲ್ಲೆಯ ಯಮ್ಮಿಗನೂರು ಬ್ಲಾಕ್‌ನ ಕಾಲುಗೊಟ್ಲಾ ಗ್ರಾಮದಲ್ಲಿ ನಡೆದ ‘ನಮ್ಮ ಭೂಮಿ–ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಎನ್. ಚಂದ್ರಬಾಬು ನಾಯ್ಡು, ಟಿಟಿಡಿಗೆ ಪೂರೈಸಿದ ತುಪ್ಪದಲ್ಲಿ ಗಂಭೀರ ಮಟ್ಟದ ಕಲಬೆರಕೆ ನಡೆದಿದೆ ಎಂದು ಆರೋಪಿಸಿದರು. ಸಿಬಿಐ ನೇತೃತ್ವದ ಎಸ್‌ಐಟಿ ವರದಿಯನ್ನು ಉಲ್ಲೇಖಿಸಿದ ಅವರು, ಶೌಚಾಲಯ ಹಾಗೂ ಬಾತ್‌ರೂಮ್ ಸ್ವಚ್ಛತೆಗೆ ಬಳಸುವ ಅಪಾಯಕಾರಿ ರಾಸಾಯನಿಕಗಳನ್ನು ಖರೀದಿಸಿ ತುಪ್ಪದಲ್ಲಿ ಮಿಶ್ರಣ ಮಾಡಲಾಗಿದೆ ಎಂಬುದು ವರದಿಯಲ್ಲಿ ಸ್ಪಷ್ಟವಾಗಿದೆ ಎಂದರು. ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇಲ್ಲ ಎಂದು ವೈಎಸ್‌ಆರ್‌ಸಿಪಿ ನಾಯಕರು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ; ಆದರೆ ಪ್ರಾಣಿಗಳ ಕೊಬ್ಬು ಇರುವುದೂ ಎಸ್‌ಐಟಿ ವರದಿಯಿಂದಲೇ ದೃಢಪಟ್ಟಿದೆ ಎಂದು ಹೇಳಿದರು. ತಿರುಪತಿ ಮಾತ್ರವಲ್ಲ, ಶ್ರೀಶೈಲಂ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಿಗೂ ಹಿಂದಿನ ಸರ್ಕಾರದ ಅವಧಿಯಲ್ಲಿ ಕಲಬೆರಕೆ ತುಪ್ಪ ಪೂರೈಕೆಯಾಗಿದೆ ಎಂಬುದಾಗಿ ನಾಯ್ಡು ಗಂಭೀರ ಆರೋಪ ಮಾಡಿದರು.

ಈ ಆರೋಪಗಳಿಗೆ ಬೆಂಬಲವಾಗಿ ಮಾತನಾಡಿದ ಗೃಹ ಸಚಿವೆ ವಂಗಲಪುಡಿ ಅನಿತಾ, CFTRI, NDDB, NTCSI ಹಾಗೂ SIT—ಈ ನಾಲ್ಕು ಪ್ರತ್ಯೇಕ ವರದಿಗಳು ತುಪ್ಪದ ಕಲಬೆರಕೆಯನ್ನು ಖಚಿತಪಡಿಸಿವೆ ಎಂದರು. ಶೌಚಾಲಯ ಸ್ವಚ್ಛತೆಗೆ ಬಳಸುವ LABSA (ಲೀನಿಯರ್ ಆಲ್ಕೈಲ್ ಬೆಂಜೀನ್ ಸಲ್ಫೋನಿಕ್ ಆಸಿಡ್) ಎಂಬ ಕೆಮಿಕಲ್ ತುಪ್ಪದಲ್ಲಿ ಬಳಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ವೈಎಸ್‌ಆರ್‌ಸಿಪಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಆರೋಪಗಳನ್ನು ತಳ್ಳಿ ಹಾಕಿ, ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿಲ್ಲ ಎಂದು ಸ್ಪಷ್ಟವಾಗಿದೆ; ಮಾಜಿ ಟಿಟಿಡಿ ಅಧ್ಯಕ್ಷರಿಗೆ ಸಿಬಿಐ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಹೇಳಿದರು. ರಾಜಕೀಯ ಲಾಭಕ್ಕಾಗಿ ದೇವರನ್ನು ರಾಜಕೀಯಕ್ಕೆ ಎಳೆದು ತರುತ್ತಿರುವುದು ಸುಳ್ಳು ಪ್ರಚಾರ ಮಾತ್ರ ಎಂದು ಜಗನ್ ಪ್ರತಾರೋಪ ಹೊರಿಸಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-07 17:57:00
No Reviews