ಸೂಪರ್ ಸಂಡೇಯಲ್ಲಿ ಹರಿಣಗಳ ವಿರುದ್ಧ ಭಾರತಕ್ಕೆ ಕಠಿಣ ಸವಾಲು

ತನ್ನದೇ ನೆಲದಲ್ಲಿ ವಿಶ್ವಕಪ್ ನಡೆಯುತ್ತಿದ್ದರೂ ಭಾರತ ತಂಡ ಇನ್ನೂ ಸಂಪೂರ್ಣ ಸಿದ್ಧತೆ ಸಾಧಿಸಿಲ್ಲ ಎಂಬ ಆತಂಕ ಗೋಚರಿಸುತ್ತದೆ. ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದರೂ ಬಲಿಷ್ಠ ತಂಡಗಳ ಸವಾಲು ಈಗಷ್ಟೇ ಎದುರಾಗಲಿದೆ. ನೆದರ್ಲೆಂಡ್ಸ್ ವಿರುದ್ಧ ಸೋಲಿನ ಅಂಚಿನವರೆಗೆ ಹೋಗಿ ಕಷ್ಟಪಟ್ಟು ಗೆದ್ದ ಕ್ಷಣ ಇನ್ನೂ ಮರೆತಿಲ್ಲ. ಬೌಲಿಂಗ್ ವಿಭಾಗ ತ್ವರಿತವಾಗಿ ಸುಧಾರಿಸದಿದ್ದರೆ ಮುಂದಿನ ಹಂತ ಕಠಿಣವಾಗುವ ಸಾಧ್ಯತೆ ಇದೆ.

ಹೊರನೋಟಕ್ಕೆ ತಂಡ ಸಮತೋಲನವಾಗಿದ್ದರೂ ಒಳಗಣ ಸಮಸ್ಯೆಗಳು ಸ್ಪಷ್ಟವಾಗಿವೆ. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಹ್ಯಾಟ್ರಿಕ್ ಶೂನ್ಯಕ್ಕೆ ಔಟಾಗಿರುವುದು ಚಿಂತೆಗೆ ಕಾರಣ. ಅನುಭವಿ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ನಿರೀಕ್ಷಿತ ಪರಿಣಾಮ ತೋರಿಲ್ಲ; ತಿಲಕ್ ವರ್ಮ ಬ್ಯಾಟ್ ಕೂಡ ಮೌನವಾಗಿದೆ. ಸದ್ಯ ಇಶಾನ್ ಕಿಶನ್ ಮಾತ್ರ ನಂಬಿಕಸ್ಥ ಪ್ರದರ್ಶನ ನೀಡುತ್ತಿದ್ದಾರೆ.

ಸೂಪರ್-8 ಹಂತದಲ್ಲಿ ಪ್ರತಿ ಗುಂಪಿನಲ್ಲಿ ಕನಿಷ್ಠ ಎರಡು ಗೆಲುವು ಸಾಧಿಸಿದ ತಂಡಕ್ಕೆ ಸೆಮಿಫೈನಲ್ ದಾರಿ ಬಹುತೇಕ ತೆರೆಯಲಿದೆ. ಆದ್ದರಿಂದ ಪ್ರತಿ ಪಂದ್ಯವೂ ಅತ್ಯಂತ ಮಹತ್ವ ಪಡೆದಿದ್ದು ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆಯಾಗಿದೆ. ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ಈಗಾಗಲೇ ಮೂರು ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದು ಅವರಿಗೆ ಸ್ವಲ್ಪ ಮುನ್ನಡೆ ಇದೆ; ಭಾರತ ಇಲ್ಲಿ ನೆದರ್ಲೆಂಡ್ಸ್ ವಿರುದ್ಧ ಒಂದೇ ಪಂದ್ಯ ಆಡಿದೆ.

ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿ.ಕೀ.), ರಿಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್, ಜೇಸನ್ ಸ್ಮಿತ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಕ್ವೆನಾ ಮಫಕಾ, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-21 19:21:32
No Reviews